ಬೀದರ್‌ನ ಸರ್ಕಾರಿ ನರ್ಸಿಂಗ್ ಸ್ಕೂಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಶುಶ್ರೂಷಕರ ದಿನ ಕಾರ್ಯಕ್ರಮದಲ್ಲಿ ಬ್ರಿಮ್ಸ್ ವೈದ್ಯಕೀಯ ನಿರ್ದೇಶಕ ಶಿವಕುಮಾರ ಶೆಟಕಾರ್ ಜ್ಯೋತಿ ಬೆಳಗಿಸಿದರು. ಎಸ್‌ಪಿ ಪ್ರದೀಪ್ ಗುಂಟಿ ಪತ್ನಿ ಶೈನಿ, ಸೋಮಶೇಖರ ಬಿರಾದಾರ, ಸುರೇಖಾ, ಡಾ.ಸಂಜೀವಕುಮಾರ ಪಾಟೀಲ, ಡಾ.ಮಹಮ್ಮದ್ ಅಹ್ಮದೊದ್ದೀನ್ ಇತರರಿದ್ದರು. 
ಜಿಲ್ಲೆ

ಶುಶ್ರೂಷಕರ ವೈದ್ಯಕೀಯ ಸೇವೆ ಶ್ರೇಷ್ಠ

ಬೀದರ್: ಶುಶ್ರೂಷಕರ ವೈದ್ಯಕೀಯ ಸೇವೆ ಶ್ರೇಷ್ಠವಾದದ್ದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪತ್ನಿ ಶೈನಿ ಹೇಳಿದರು.

ನಗರದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಶುಶ್ರೂಷಕರ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ರೋಗಿ ಆಸ್ಪತ್ರೆಗೆ ಬರುವುದರಿಂದ ಹಿಡಿದು ಗುಣಮುಖನಾಗಿ ಬಿಡುಗಡೆ ಹೊಂದುವವರೆಗೂ ಶುಶ್ರೂಷಕರದು ಮಹತ್ವದ ಪಾತ್ರವಿರುತ್ತದೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನರ್ಸಿಂಗ್ ಸ್ಕೂಲ್ ಹಾಗೂ ಶುಶ್ರೂಷಾ ಕಾಲೇಜು ಪ್ರಾಚಾರ್ಯ ರಾಜಕುಮಾರ ಮಾಳಗೆ ಮಾತನಾಡಿ, ಫ್ಲಾರೆನ್ಸ್​ ನೈಟಿಂಗೇಲ್ ಜನ್ಮದಿನವನ್ನು ವಿಶ್ವ ಶುಶ್ರೂಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಇಟಲಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಉನ್ನತ ಹುದ್ದೆಗೆ ಹೋಗಬಹುದಿತ್ತು. ಆದರೆ ಬಡ ಜನರ ವೈದ್ಯಕೀಯ ಸೇವೆಗೆ ನೆರವಾಗಲು ಶುಶ್ರೂಷಕ ವೃತ್ತಿ ಆಯ್ಕೆ ಮಾಡಿಕೊಂಡರು. ೧೮೫೪ರ ಮಹಾ ಯುದ್ಧದ ಸಂದರ್ಭದಲ್ಲಿ ಶುಶ್ರೂಷಕರ ತಂಡದೊಂದಿಗೆ ಗಾಯಾಳು ಸೈನಿಕರ ಶುಶ್ರೂಷೆ ಮಾಡಿದ ಮಹಾಮಾತೆ ಎಂದು ಬಣ್ಣಿಸಿದರು.

ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ, ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿ ಸುರೇಖಾ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ.ಸಂಜೀವಕುಮಾರ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹಮ್ಮದ್ ಅಹ್ಮದೊದ್ದೀನ್, ಪ್ರಭುಲಿಂಗ ತೂಗಾವೆ, ದೇವಪ್ಪ ಚಾಂಬೋಳೆ, ದಿಲೀಪ ಡೊಂಗರಗಿ ಇತರರಿದ್ದರು. ಪ್ರಕಾಶ ಮಹಿಮಾಕರ್ ನಿರೂಪಿಸಿದರು.

ಇದಕ್ಕೂ ಮುನ್ನ ಸರ್ಕಾರಿ ನರ್ಸಿಂಗ್ ಸ್ಕೂಲ್ ಹಾಗೂ ಬ್ರಿಮ್ಸ್ ಶುಶ್ರೂಷಾ ಕಾಲೇಜು ವತಿಯಿಂದ ಫ್ಲಾರೆನ್ಸ್​ ನೈಟಿಂಗೇಲ್ ಭಾವಚಿತ್ರದ ಮೆರವಣಿಗೆ ನಡೆಯಿತು. ಬಳಿಕ ವಿದ್ಯಾರ್ಥಿಗಳು ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು.