ಜಿಲ್ಲೆ

ಶುಲ್ಕ ಮರುಪಾವತಿಗೆ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

 ಹಾಸನ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಪಡೆದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಭಾರತ ಸರ್ಕಾರದಿಂದ ನಿಯೋಜಿಸಲ್ಪಟ್ಟ ತಂಡದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕವನ್ನು ಮರುಪಾವತಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿಗಳನ್ನು ಅಹ್ವಾನಿಲಾಗಿದೆ.

ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮರುಪಾವತಿ ಮಾಡುವ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಸರ್ಕಾರದ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳ ಅಧಿಕೃತ ಬೋಧನಾ ಶುಲ್ಕಗಳನ್ನು ವಾರ್ಷಿಕ 50,000 ರೂ. ಗರಿಷ್ಠ ಮೊತ್ತ ಮರುಪಾವತಿಯಾಗಲಿದೆ. ಆಯಾ ವರ್ಷದ ಶೈಕ್ಷಣಿಕ ಶುಲ್ಕವನ್ನು ಹಿಂದಿನ 5 ವರ್ಷಗಳ ಕ್ರೀಡಾ ಸಾಧನೆಯನ್ನು ಪರಿಗಣಿಸಿ ನೀಡಲಾಗುವುದು. ಈ ಯೋಜನೆಯ ಪ್ರಯೋಜನವನ್ನು ಅಂತಾರಾಷ್ಟ್ರೀಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಪಡೆದ ಪ್ರಥಮ ಪಿಯುಸಿಯಿಂದ ಸ್ನಾತಕೊತ್ತರ ಪದವಿ (ವೃತ್ತಿಪರ ಕೋರ್ಸ್ ಒಳಗೊಂಡಂತೆ) ವ್ಯಾಸಂಗ ಮಾಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳ ಕ್ರೀಡಾ ವಿದ್ಯಾರ್ಥಿಗಳು ಆರ್ಹರಿರುತ್ತಾರೆ.

ಶುಲ್ಕ ಪಾವತಿಸಿದ ಶೈಕ್ಷಣಿಕ ವರ್ಷದ ರಸೀದಿಗಳೊಂದಿಗೆ ಶಾಲಾ ಮುಖ್ಯೋಪಾಧ್ಯಾಯರು, ಕಾಲೇಜು ಪ್ರಾಂಶುಪಾಲರ ಮೂಲಕ ದೃಢೀಕರಿಸಿ ಸಂಬಂಧಪಟ್ಟ ಜಿಲ್ಲೆಯ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಶಿಫಾರಸ್ಸಿನೊಂದಿಗೆ ಸಲ್ಲಿಸತಕ್ಕದ್ದು. ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರಾದ ಕರ್ನಾಟಕ ಕ್ರೀಡಾಪಟುಗಳು, ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಮತ್ತು ಕಂಚಿನ ಪದಕ ವಿಜೇತರಾದ ಸಾಧನೆಯನ್ನು ಪರಿಗಣಿಸಲಾಗುವುದು. ವಿಕಲಚೇತನ ಕ್ರೀಡಾಪಟುಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆ. ಜತೆಗೆ ವಿಕಲಚೇತನ ಕ್ರೀಡಾಪಟುಗಳು ಕಡ್ಡಾಯವಾಗಿ ಸರ್ಕಾರಿ ವೈದ್ಯರಿಂದ ನಿಗದಿತ ವೈದ್ಯಕೀಯ ಪ್ರಮಾಣಪತ್ರಗಳನ್ನು ಸಲ್ಲಿಸತಕ್ಕದ್ದು.

ಯಾವುದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ಕ್ರೀಡಾ ಸ್ಫರ್ಧೆಯಲ್ಲಿ ನೇರ ಪ್ರವೇಶ ಪಡೆದಂತಹ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿ ಪಡೆಯಲು ಅವಕಾಶವಿರುವುದಿಲ್ಲ. ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯದಿಂದ ಅಧಿಕೃತ ಕ್ರೀಡಾ ಸಂಸ್ಥೆಗಳಿಗೆ ಸಂಘಟಿಸಲಾದ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ರಾಜ್ಯದ ಕ್ರೀಡಾಪಟುಗಳು ಈ ಯೋಜನೆಗೆ ಅರ್ಹರಿರುತ್ತಾರೆ.

ಕ್ರೀಡಾಪಟುಗಳು ಅರ್ಜಿಯನ್ನು ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನವಾಗಿರುತ್ತಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ರೀಡಾ ವಸತಿ ನಿಲಯ, ಎಂ.ಜಿ. ರಸ್ತೆ, ಹಾಸನ ಸಲ್ಲಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ತಿಳಿಸಿದ್ದಾರೆ.