ಜಿಲ್ಲೆ

ಶುರುವಾದ ಶಾಲಾ ದಾಖಲಾತಿ ಆಂದೋಲನ

ಚಾಮರಾಜನಗರ: ಬೇಸಿಗೆ ರಜೆಯ ಶುರುವಿನಲ್ಲೇ ಸರ್ಕಾರಿ ಶಾಲಾ ದಾಖಲಾತಿ ಆಂದೋಲನ ಪ್ರಾರಂಭವಾಗಿದ್ದು, ಹಲವೆಡೆ ಈಗಾಗಲೇ ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಹನೂರು ಹಾಗೂ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ನೇ ತರಗತಿಗೆ ಮಕ್ಕಳನ್ನು ಕರೆತರುವ ಪ್ರಯತ್ನವಾಗಿ ಪ್ರತಿವರ್ಷವೂ ದಾಖಲಾತಿ ಆಂದೋಲನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದು ಶಾಲಾ ಶೈಕ್ಷಣಿಕ ವರ್ಷ ಮುಕ್ತಾಯವಾದ ದಿನದಿಂದ, ಶಾಲೆ ಪ್ರಾರಂಭವಾಗುವ ದಿನಗಳ ವರೆಗೂ ನಿರಂತರವಾದ ಪ್ರಕ್ರಿಯೆಯಾಗಿದೆ. ಅದರಂತೆ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ 1ನೇ ತರಗತಿಗೆ ಮಕ್ಕಳನ್ನು ಸೇರಿಸುವಂತೆ ಏ.7 ರಿಂದ ಮೂರು ದಿನಗಳ ಕಾಲ ದಾಖಲಾತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗ್ರಾಮಗಳಿಗೆ ತೆರಳಿ ದಾಖಲಾತಿ ಆಂದೋಲನದ ಬ್ಯಾನರ್ ಹಿಡಿದು, ತಮ್ಮ ಶಾಲಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಜಾಥಾ ಮತ್ತು ಇನ್ನಿತರೆ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ.

ಶಾಲಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ತೆರಳಿ 1ನೇ ತರಗತಿಗೆ ಸೇರಬಹುದಾದ ಮಕ್ಕಳ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸರ್ಕಾರಿ ಶಾಲೆಗಳ 1ನೇ ತರಗತಿಗೆ ಸೇರುವ ಮಕ್ಕಳು ಇರುವಂತಹ ಮನೆಗಳಿಗೆ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಎಂಬ ಮನವಿಯನ್ನು ಮಾಡಿದ್ದಾರೆ. ಆದರೆ ಕೆಲವು ಕಡೆಗಳಲ್ಲಿ ಈ ದಾಖಲಾತಿ ಆಂದೋಲನ ನೀರಸದಿಂದ ಕೂಡಿದ್ದು, ಶಾಲಾ ಶಿಕ್ಷಕರು ದಾಖಲಾತಿ ಆಂದೋಲನವನ್ನು ಪರಿಣಾಮಕಾರಿಯಾಗಿ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದಾಗಿಯೇ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಕಳುಹಿಸಲು ಮುಂದಾಗುತ್ತಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕೆಲವು ಕಡೆಗಳಲ್ಲಿ ಮಕ್ಕಳು ದಾಖಲು:

ಜಿಲ್ಲೆಯಲ್ಲಿ 2024-25 ನೇ ಸಾಲಿನಲ್ಲಿ 403 ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 86 ಪ್ರೌಢಶಾಲೆಗಳು ಇದ್ದು, ಒಟ್ಟು 55,091 ವಿದ್ಯಾರ್ಥಿಗಳು ಇದ್ದರು. ಈ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಕೊರತೆಯಿಂದ 12 ಸರ್ಕಾರಿ ಶಾಲೆಗಳು ಮುಚ್ಚಿದ್ದವು. ಆಗಾಗಿ 2025-26 ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆತರುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರೆ ತಪ್ಪಾಗಲಾರದು. ಅದರಂತೆ ಕೆಲವು ಕಡೆಗಳಲ್ಲಿ ಬಹಳ ವಿಶೇಷವಾಗಿ ದಾಖಲಾತಿ ಆಂದೋಲನವನ್ನು ಪ್ರಾರಂಭಿಸಿದ್ದು, ಚಾ.ನಗರ ತಾಲೂಕಿನ ಸಿದ್ದಯ್ಯನಪುರ ಶಾಲೆಯಲ್ಲಿ ಈಗಾಗಲೇ 10 ಮಕ್ಕಳು 1 ನೇ ತರಗತಿಗೆ ದಾಖಲಾಗಿದ್ದಾರೆ. ಶಿಕ್ಷಕರು ಅಂಗನವಾಡಿಗೆ ಭೇಟಿ ನೀಡಿ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿದ್ದು, ಮುಂದಿನ ದಿನಗಳಲ್ಲಿ 20 ಮಕ್ಕಳು ದಾಖಲಾಗುತ್ತಾರೆ ಎಂದು ಹೇಳಲಾಗುತ್ತಿದೆ. ಅಂತೇಯೇ ಹಲವು ಗ್ರಾಮಗಳಲ್ಲಿ ಶಿಕ್ಷಕರ ಆಯ್ಕೆಯಂತೆ ದಾಖಲಾತಿ ಆಂದೋಲನ ಮುಂದುವರಿದಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗಳತ್ತಾ ಕರೆತರುವ ಪ್ರಯತ್ನಗಳನ್ನು ನಡೆಯುತ್ತಿದೆ.

ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿ:

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಅಥವಾ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿದರೆ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳನ್ನು ಸೆಳೆಯಬಹುದಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ. ಆಗಾದಾಗ ಮಾತ್ರ ಗ್ರಾಮೀಣ ಭಾಗದ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುವುದನ್ನು ತಪ್ಪಿಸಬಹುದಾಗಿದೆ. 2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲೇ ರಾಜ್ಯ ಸರ್ಕಾರ ಕೂಡ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಪೂರ್ವ ತರಗತಿಗಳನ್ನು ತೆರೆಯಲು ಮುಂದಾಗಿತ್ತು. ಆದರೆ ಅಂಗನವಾಡಿ ಕಾರ್ಯಕರ್ತೆಯರ ವಿರೋಧದಿಂದ ಎಲ್‌ಕೆಜಿ, ಯುಕೆಜಿ ತೆಗೆಯುವ ತೀರ್ಮಾನಕ್ಕೆ ಹಿನ್ನಡೆಯಾಯಿತು. ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಎಲ್‌ಕೆಜಿ, ಯುಕೆಜಿ ಪ್ರಾರಂಭವಾದರೆ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತಾ ಮುಖಮಾಡಿಸಬಹುದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಿಗೆ ಬೇಸಿಗೆ ರಜೆ ನೀಡಿದ ದಿನದಿಂದಲೇ ದಾಖಲಾತಿ ಆಂದೋಲನ ಶುರುವಾಗಿದೆ. ದಾಖಲಾತಿ ಆಂದೋಲನ ನಿರಂತರ ಪ್ರಕ್ರಿಯೆಯಾಗಿದ್ದು, ಶಿಕ್ಷಕರು ತಮ್ಮ ಸಮಯಕ್ಕೆ ಅನುಗುಣವಾಗಿ ಆಂದೋಲನ ಕೈಗೊಳ್ಳುತ್ತಾರೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಪ್ರಾರಂಭವಾದರೆ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತಾ ಮತ್ತಷ್ಟು ಸೆಳೆಯಬಹುದಾಗಿದೆ.

-ಹೇಮಾ, ಸಿಆರ್‌ಪಿ, ಚಾಮರಾಜನಗರ

ನಮ್ಮ ಶಾಲೆಯಲ್ಲಿ ಈಗಾಗಲೇ ದಾಖಲಾತಿ ಆಂದೋಲನ ಪ್ರಾರಂಭ ಮಾಡಿದ್ದೇವೆ. ಸುಮಾರು 10 ಮಕ್ಕಳು ದಾಖಲಾಗಿದ್ದು, ಅಂಗನವಾಡಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನು 20 ಮಕ್ಕಳು ದಾಖಲಾಗುವ ನಿರೀಕ್ಷೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗಬೇಕು ಎಂದು ಮನವಿ ಮಾಡುತ್ತೇನೆ.

-ನಾರಾಯಣ್, ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಾಮರಾಜನಗರ