ಗುಂಡ್ಲುಪೇಟೆ: ಮುಜರಾಯಿ ಇಲಾಖೆಯು ತಾಲೂಕಿನ ಸ್ಕಂದಗಿರಿ ಪಾರ್ವತಾಂಬ ಬೆಟ್ಟದಲ್ಲಿ ಕಲ್ಯಾಣ ಮಂಟಪಗಳನ್ನು ದುರಸ್ತಿ ಮಾಡಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಪುಣ್ಯಕ್ಷೇತ್ರದಲ್ಲಿ ಶುಭ ಕಾರ್ಯಗಳನ್ನು ನಡೆಸಲು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೌರಾಣಿಕ ಹಾಗೂ ಧಾರ್ಮಿಕ ಹಿನ್ನೆಲೆಯಿರುವ ಪಾರ್ವತಿ ಬೆಟ್ಟವು ಸ್ಕಂದ ಕ್ಷೇತ್ರವಾಗಿದೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ತಾಲೂಕು ಹಾಗೂ ಸುತ್ತಮುತ್ತಲಿನ ಜನರು ಮದುವೆ, ನಾಮಕರಣ ಮುಂತಾದ ಶುಭ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ತಾಲೂಕಿನ ನಾನಾ ಗ್ರಾಮಗಳ ಭಕ್ತರಲ್ಲದೆ ಮೈಸೂರು ಹಾಗೂ ಮಂಡ್ಯ ಭಾಗದಿಂದಲೂ ದೇವಾಲಯಕ್ಕೆ ಬರುವ ಭಕ್ತರು ರಾತ್ರಿ ಉಳಿದು ಬೆಳಗ್ಗೆ ದೇವರ ಸೇವೆ ಸಲ್ಲಿಸಿ ಹೋಗುವುದು ವಾಡಿಕೆಯಾಗಿದೆ. ಆದರೆ, ಇಲ್ಲಿಗೆ ಬರುವ ಭಕ್ತರಿಗೆ ಮುಜರಾಯಿ ಇಲಾಖೆ ಮೂಲಸೌಕರ್ಯ ಕಲ್ಪಿಸದೆ ತೊಂದರೆ ಅನುಭವಿಸುತ್ತಿದ್ದಾರೆ.
ಹಲವಾರು ಭಕ್ತರು ಹಾಗೂ ದುರ್ಬಲರು ಹಾಗೂ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುವಷ್ಟು ಚೈತನ್ಯವಿಲ್ಲದ ಎಲ್ಲ ವರ್ಗಗಳ ಬಡವರೂ ಹಿಂದಿನಿಂದಲೂ ಈ ಪುಣ್ಯಕ್ಷೇತ್ರದಲ್ಲಿ ಮದುವೆ ಮಾಡುತ್ತಾ ಬಂದಿದ್ದಾರೆ. ದೂರದ ಸುತ್ತೂರು, ಮಲೆಮಹದೇಶ್ವರಬೆಟ್ಟ ಹಾಗೂ ಧರ್ಮಸ್ಥಳಗಳಂತಹ ಪುಣ್ಯಕ್ಷೇತ್ರಗಳಿಗೆ ಹೋಗಲು ಆಗದ ಬಡ ಹಾಗೂ ಮಧ್ಯಮ ವರ್ಗದ ಜನರು ಇಲ್ಲಿಯೇ ಶುಭಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.
ಸದ್ಯ ಮುಜರಾಯಿ ಇಲಾಖೆಯ ವಶದಲ್ಲಿರುವ ದೇವಾಲಯದ ಆವರಣದಲ್ಲಿ ಮದುವೆ ಮಾಡುವವರು ತಾಲೂಕು ಕಚೇರಿಯಲ್ಲಿರುವ ಮುಜರಾಯಿ ಶಾಖೆಯಲ್ಲಿ 5 ಸಾವಿರ ರೂ. ಪಾವತಿಸಿದ ರಸೀದಿ ತಂದುಕೊಟ್ಟರೆ ದೇವಾಲಯದ ಅರ್ಚಕರು ಕಲ್ಯಾಣ ಮಂಟಪವನ್ನು ಬಿಟ್ಟುಕೊಡುತ್ತಾರೆ. ಆದರೆ ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಿದ ಮಂಟಪವು ನಿರ್ವಹಣೆಯ ಕೊರತೆಯಿಂದ ಪಾಳು ಬೀಳುತ್ತಿದ್ದು ಛಾವಣಿ ಹಾಗೂ ನೆಲಕ್ಕೆ ಹಾಕಿದ ಸಿಮೆಂಟ್ ಕಿತ್ತುಬರುತ್ತಿವೆ.
ಇದರಿಂದ ಬಹುತೇಕ ಜನರು ಬಯಲಿನಲ್ಲಿಯೇ ಶಾಮಿಯಾನ ಹಾಕಿಸಿ ಕಾರ್ಯ ಮಾಡುತ್ತಿದ್ದಾರೆ. ಬಡಜನತೆಗೆ ಶಾಮಿಯಾನ ಟೇಬಲ್, ಕುರ್ಚಿಗಳ ಬಾಡಿಗೆ ದುಬಾರಿಯಾಗುತ್ತಿದ್ದು ಪಟ್ಟಣಗಳ ಕಲ್ಯಾಣ ಮಂಟಪಗಳಲ್ಲಿಯೇ ಆಗುವಷ್ಟೇ ವೆಚ್ಚವಾಗುತ್ತಿದೆ. ಅಲ್ಲದೆ ಬೆಟ್ಟದ ತಪ್ಪಲಿನಲ್ಲಿ 75 ಲಕ್ಷ ರೂ. ವೆಚ್ಚದ ಅತಿಥಿಗೃಹ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು ಈಗಾಗಲೇ ಇಟ್ಟಿಗೆಗಳು ಕಿತ್ತುಬೀಳುತ್ತಾ ನಿರುಪಯುಕ್ತವಾಗುತ್ತಿದೆ. ಜತೆಗೆ ಮದುವೆ ಮಾಡುವವರಿಗೆ ರಾತ್ರಿ ವೇಳೆ ಉಳಿದುಕೊಳ್ಳಲು ಸಮರ್ಪಕ ವಸತಿ ವ್ಯವಸ್ಥೆ ಇಲ್ಲದೆ ಸಿಕ್ಕ ಸಿಕ್ಕಲ್ಲಿ ಮಲಗುವಂತಾಗಿದೆ. ಬಫರ್ ವಲಯಕ್ಕೆ ಸೇರಿದ ಈ ಬೆಟ್ಟದಲ್ಲಿ ಹುಲಿ ಹಾಗೂ ಚಿರತೆಗಳ ಸಂಚಾರವಿದ್ದು ವನ್ಯಜೀವಿಗಳ ಭೀತಿಯಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆ.
ಇನ್ನಾದರೂ ಮುಜರಾಯಿ ಇಲಾಖೆಯವರು ಕಲ್ಯಾಣಮಂಟಪ ರಿಪೇರಿ ಮಾಡಿಸಿ ಬಡಜನತೆ ಶುಭ ಕಾರ್ಯಗಳನ್ನು ನಡೆಸಲು ಅನುವು ಮಾಡಿಕೊಡಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.