ಜಿಲ್ಲೆ

ಶುದ್ಧ ನೀರು ಆರೋಗ್ಯಕ್ಕೆ ಔಷಧ ಇದ್ದಂತೆ : ಶಾಸಕ ಸಿ.ಎನ್.ಬಾಲಕೃಷ್ಣ ಅಭಿಮತ

ಹಾಸನ : ಕುಡಿಯಲು ಹಾಗೂ ಅಡುಗೆ ಮಾಡಲು ಶುದ್ಧ ನೀರನ್ನು ಬಳಸುವುದು ಸೂಕ್ತ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಚನ್ನರಾಯಪಟ್ಟಣ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಶುದ್ಧ ನೀರು ಆರೋಗ್ಯಕ್ಕೆ ಔಷಧ ಇದ್ದಂತೆ ಎಂದರು.


ಕಳೆದ 15-20 ವರ್ಷಗಳಿಂದ ವಾಡಿಕೆಯಂತೆ ಮಳೆಯಾಗದಿದ್ದ ಪರಿಣಾಮ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಕೊಳವೆ ಬಾವಿಗಳಲ್ಲಿ ಹೆಚ್ಚು ಆಳದಿಂದ ಪೂರೈಕೆಯಾಗುವ ನೀರಿನಲ್ಲಿ ಅಪಾಯಕಾರಿ ಅಂಶಗಳು ಕಾಣಿಸಿಕೊಂಡ ವಿಷಯ ಆತಂಕ ಸೃಷ್ಟಿಸಿತ್ತು ಎಂದು ತಿಳಿಸಿದರು.


ಕಾಲನಿಯ ದೇಗುಲ ನಿರ್ಮಾಣಕ್ಕೆ ಈಗಾಗಲೇ ಅನುದಾನ ಕಲ್ಪಿಸಲಾಗಿದೆ. ಗ್ರಾಮದ ಹೆಬ್ಬಾಲ ಬಳಿ ಮುಖ್ಯದ್ವಾರ ಬಾಗಿಲು ನಿರ್ಮಿಸಲು 1.50 ಲಕ್ಷ ರೂ. ಅನುದಾನ ನೀಡಲಾಗುವುದು. ಗ್ರಾಮದ ಕೆಲ ಬೀದಿಗಳಿಗೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ತಿಮ್ಮಲಾಪುರ, ಗೌಡರಹಳ್ಳಿ, ಡಿ.ತುಮಕೂರು, ಬಿದರಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.


ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜೇಗೌಡ, ಸದಸ್ಯೆ ಶೃತಿ, ಮಾಜಿ ಅಧ್ಯಕ್ಷ ಜಗದೀಶ್, ಪ್ರಮುಖರಾದ ವೈ.ಸಿ.ಮಂಜು, ಜೆ.ಎಸ್.ಮಂಜುನಾಥ್, ಎಚ್.ಎಸ್.ನಾಗರಾಜ್, ಡೇರಿ ಕಿಟ್ಟಣ್ಣ, ಚಂದ್ರಣ್ಣ ಇತರರು ಇದ್ದರು.