ರಾಣೆಬೆನ್ನೂರ: ತಾಲೂಕಿನ ರಾಹುತನಕಟ್ಟಿ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಕಳೆದ ಮೂರು ವರ್ಷದ ಹಿಂದೆಯೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಿುಸಲಾಗಿದೆ. ಆದರೆ, ಈವರೆಗೂ ಘಟಕದಿಂದ ಹನಿ ನೀರು ಜನತೆಗೆ ತಲುಪಿಲ್ಲ. ಹೀಗಾಗಿ, ಗ್ರಾಮಸ್ಥರು ಗಡಸು ನೀರು ಕುಡಿದು ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಗ್ರಾಮಕ್ಕೆ ಸದ್ಯ ಮೇಡ್ಲೇರಿ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ನೀರಿನಲ್ಲಿ ಕಲ್ಲಿನ ಪುಡಿ, ಮಣ್ಣು ಬರುತ್ತಿದೆ. ಒಮ್ಮೊಮ್ಮೆ ಸಂಪೂರ್ಣ ಕೆಸರುಮಯ ನೀರು ಬರುತ್ತಿದೆ. ನೀರನ್ನು ತುಂಬಿಟ್ಟು ಒಂದು ದಿನ ಕಳೆದರೆ ಸಾಕು, ದುರ್ವಾಸನೆ ಬರುತ್ತಿದೆ. ಗ್ರಾಮದಲ್ಲಿನ ನೀರು ಶುದ್ಧೀಕರಣ ಘಟಕ ಬಂದ್ ಆಗಿರುವುದರಿಂದ ಇಂಥ ಸಮಸ್ಯೆ ಎದುರಾಗಿದೆ. ಆದರೆ, ಇದನ್ನು ದುರಸ್ತಿ ಪಡಿಸಬೇಕಾದ ಗ್ರಾಪಂ, ತಾಪಂ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ.
ಘಟಕ ಸ್ಥಳಾಂತರ: ಮೂರು ವರ್ಷದ ಹಿಂದೆಯೇ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ, ಘಟಕ ಕಾರ್ಯನಿರ್ವಹಿಸಿದ್ದು ಕೇವಲ ಎರಡು ದಿನ. ತಾಂತ್ರಿಕ ದೋಷ ಹಾಗೂ ಬೋರ್ವೆಲ್ ನೀರು ಪೂರೈಕೆ ಆಗುತ್ತಿಲ್ಲ ಎನ್ನುವ ಕಾರಣದಿಂದ ಬಂದ್ ಆಗಿದ್ದು, ಇಂದಿಗೂ ಆರಂಭಗೊಂಡಿಲ್ಲ. ಅಲ್ಲದೆ, ಘಟಕದಿಂದ ಹೊರ ಬರುವ ಅಶುದ್ಧ ನೀರು ಹರಿದು ಹೋಗಲು ಜಾಗವಿಲ್ಲ. ಆದ್ದರಿಂದ ಘಟಕವನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಪಂನವರು ಬೇರೆಡೆ ಸ್ಥಳ ಗುರುತಿಸಿ ಘಟಕ ಸ್ಥಾಪಿಸಲು ಕಟ್ಟೆ ಸಹ ನಿರ್ವಿುಸಿದ್ದಾರೆ. ಆದರೆ ಈವರೆಗೂ ಘಟಕ ಸ್ಥಳಾಂತರಿಸಲು ಸಂಬಂಧಪಟ್ಟ ಇಲಾಖೆಯವರು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಮೇಡ್ಲೇರಿ ಕೆರೆ ನೀರನ್ನು ನೇರವಾಗಿ ಬಿಡುತ್ತಿರುವ ಕಾರಣ ಜನತೆಗೆ ರೋಗದ ಭೀತಿ ಎದುರಾಗಿದೆ. ಕೆಲವರಿಗೆ ಜ್ವರ, ವಾಂತಿ-ಭೇದಿ ಶುರುವಾಗಿದೆ. ಆದ್ದರಿಂದ ಗ್ರಾಮಸ್ಥರು ನಲ್ಲಿ ನೀರನ್ನು ಕುಡಿಯುವುದನ್ನು ಬಿಟ್ಟಿದ್ದಾರೆ. ಅನಿವಾರ್ಯವಾಗಿ ಬೇರೆ ಬೇರೆ ಊರುಗಳಿಂದ ಶುದ್ಧ ಕುಡಿಯುವ ನೀರನ್ನು ತರುತ್ತಿದ್ದಾರೆ. ಇದೀಗ ಕರೊನಾ ಭೀತಿಯಿಂದ ಬೇರೆ ಗ್ರಾಮದವರು ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಗ್ರಾಮಸ್ಥರ ಅಳಲು.
ಗ್ರಾಮದಲ್ಲಿರುವ ನೀರಿನ ಸಮಸ್ಯೆ ಕುರಿತು ಗ್ರಾಪಂ, ತಾಪಂ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ಇದೀಗ ಗಡಸು ನೀರು ಪೂರೈಕೆಯಾಗುತ್ತಿದ್ದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಕಳೆದ ಉಪ ಚುನಾವಣೆಯಲ್ಲಿ ಈ ವಿಚಾರವಾಗಿ ಮತದಾನ ಬಹಿಷ್ಕಾರ ಮಾಡಿದ್ದೇವು. ಆಗ ತಹಸೀಲ್ದಾರರು, ತಾಪಂ ಇಒ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಸಮಸ್ಯೆ ಬಗೆಹರಿಸಿಲ್ಲ. | ಶಿವಪ್ಪ ಕೆ., ಗ್ರಾಮದ ಮುಖಂಡ ರಾಹುತನಕಟ್ಟಿ ಗ್ರಾಮದ ನೀರಿನ ಸಮಸ್ಯೆ ಕುರಿತು ಇಲ್ಲಿನ ಪಿಡಿಒ ಅವರಿಂದ ಸಮಗ್ರ ಮಾಹಿತಿ ಪಡೆದು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಳಾಂತರಿಸಿ ಆರಂಭಿಸಲಾಗುವುದು. | ಎಸ್.ಎಂ. ಕಾಂಬಳೆ, ತಾಪಂ ಇಒ ರಾಣೆಬೆನ್ನೂರ