ಜಿಲ್ಲೆ

ಶುದ್ಧ ನೀರಿಗೆ 2 ರೂ. ಹೆಚ್ಚಿಸಲು ಕೆಡಿಪಿ ಸಭೆಯಲ್ಲಿ ತೀರ್ಮಾನ

ಚಿಕ್ಕಬಳ್ಳಾಪುರ : ಟ್ಯಾಂಕರ್ ನೀರು ಬಳಸುವ ಶುದ್ಧೀಕರಣ ಘಟಕಗಳಲ್ಲಿ ನೀರಿನ ಶುಲ್ಕ ಏರಿಸಲು ಜಿಲ್ಲಾಪಂಚಾಯತ್ ನಿರ್ಧರಿಸಿದ್ದು ಮಾ.11 ರಿಂದ ಎರಡು ತಿಂಗಳ ಅವಧಿಯ ಜಾರಿಗೆೆ ಸುತ್ತೋಲೆ ಹೊರಡಿಸಲು ಮುಂದಾಗಿದೆ.

ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಾಸಿಕ ಕೆಡಿಪಿ ಸಭೆಯಲ್ಲಿ ನೀರಿನ ಸಮಸ್ಯೆಯ ಬಗ್ಗೆ ಹೆಚ್ಚಿಗೆ ಚರ್ಚೆಯಾಯಿತು. ಕೊಳವೆ ಬಾವಿ ವೈಲ್ಯದಿಂದ ಅಭಾವ ಉಂಟಾದಾಗ ಟ್ಯಾಂಕರ್ ನೀರು ಪೂರೈಸುವಿಕೆ, ಶುದ್ಧೀಕರಣ ಘಟಕಗಳಲ್ಲಿ ಹೆಚ್ಚುವರಿಯಾಗಿ ಪ್ರತಿ ಬಿಂದಿಗೆಗೆ 2 ರೂ.ಶುಲ್ಕ ಏರಿಸಲು ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಶುದ್ಧೀಕರಣದ 665 ಘಟಕಗಳ ಪೈಕಿ 630 ಕಾರ್ಯನಿರ್ವಹಿಸುತ್ತಿದ್ದು 41 ಸ್ಥಗಿತಗೊಂಡಿವೆ. 32 ನಿರ್ವಹಣೆ ಮತ್ತು ದುರಸ್ತಿ ಸಮಸ್ಯೆಗೆ ತುತ್ತಾಗಿವೆ. ಬಹುತೇಕ ಕಡೆ ಘಟಕಗಳಲ್ಲಿ ನೀರಿನ ಅಭಾವ ಕಂಡು ಬಂದಿದೆ. 106 ಸಮಸ್ಯಾತ್ಮಕ ಗ್ರಾಮಗಳ ಪೈಕಿ 32 ಗ್ರಾಮಗಳಿಗೆ ದಿನಕ್ಕೆ 86 ಟ್ಯಾಂಕರ್ ಟ್ರಿಪ್ ಮೂಲಕ ನೀರು ಪೂರೈಸಲಾಗುತ್ತಿದೆ. 74 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾರಿ ಕಾರ್ಯಪಾಲಕ ಅಭಿಯಂತ ಶಿವಕುಮಾರ್ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿದ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜನರಿಗೆ ಶುದ್ಧ ನೀರು ಪೂರೈಸಬೇಕು. ಈ ಹಿನ್ನೆಲೆಯಲ್ಲಿ ಘಟಕಗಳಿಗೆ ಟ್ಯಾಂಕರ್ ನೀರು ಬಳಸಿ, ಹೆಚ್ಚುವರಿ ಶುಲ್ಕ ವಿಧಿಸಲು ಸೂಚಿಸಿದರು.

ಜಿಪಂ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸಿಇಒ ಬಿ ಫೌಜೀಯಾ ತರನ್ನುಮ್, ಉಪ ಕಾರ್ಯದರ್ಶಿ ನೋಮೇಶ್ ಕುಮಾರ್ ಮತ್ತಿತರರು ಇದ್ದರು.

ಅನುದಾನ ವಾಪಸ್ ಆದ್ರೆ ಅಧಿಕಾರಿಗಳೇ ಹೊಣೆ: ಜಿಪಂ ಅನುದಾನ ಖರ್ಚಾಗದೆ ವಾಪಸಾದಲ್ಲಿ ಅಧಿಕಾರಿಗಳೇ ಹೊಣೆ ಎಂದು ಅಧ್ಯಕ್ಷರು ಎಚ್ಚರಿಕೆ ನೀಡಿದರು. ಜಿಪಂ ಲಿಂಕ್ ಡಾಕ್ಯುಮೆಂಟ್‌ನಲ್ಲಿ 128 ಕಾಮಗಾರಿಗಳಿಗೆ 3.58 ಕೋಟಿ ರೂ.ಬಿಡುಗಡೆಯಾಗಿದ್ದು 1.90 ಕೋಟಿ ರೂ. ಉಳಿಕೆಯಾಗಿದೆ. ಜಲಾಮೃತ ಯೋಜನೆಯಡಿ 2.88 ಕೋಟಿ ರೂಗಳಿಗೆ 1.44 ಕೋಟಿ ರೂ. ಉಳಿಕೆಯಾಗಿದ್ದು ಹಣ ಖರ್ಚು ಮಾಡಲು ಮಾ.20 ಕಡೇ ದಿನ. ಅನುದಾನ ಏಕೆ ಪೂರ್ತಿ ಬಳಸಿಲ್ಲ. ಈಗ ಕೆರೆಗಳ ಅಭಿವೃದ್ಧಿ ಕೆಲಸದಲ್ಲಿ ಹೊಸದಾಗಿ 4 ಬದಲಾವಣೆ ಕಾಮಗಾರಿ ಸೇರಿಸಲಾಗಿದೆ. ಇದಕ್ಕೆ ಅನುಮೋದನೆ ಪಡೆಯುವಿಕೆ ಮತ್ತು ಕೆಲಸ ಕೈಗೊಳ್ಳುವುದು ಯಾವಾಗ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೇಕಾಬಿಟ್ಟಿ ಪ್ರಸ್ತಾವನೆ ಕೈ ಬಿಡಲು ಸೂಚಿಸಿದರು.

ಹಣ ಸಾಕಾಗುತ್ತಿಲ್ಲ : ಅಂಗನವಾಡಿ ಕೇಂದ್ರಗಳಲ್ಲಿ ಶೌಚಗೃಹ ನಿರ್ಮಾಣ ದುರಸ್ತಿ ವೆಚ್ಚದ ಅನುದಾನ ಬಿಡುಗಡೆಯಾಗುತ್ತಿರುವುದರ ಬಗ್ಗೆ ಅಧಿಕಾರಿಗಳು ಅಳಲು ತೋಡಿಕೊಂಡರು. ಜಿಲ್ಲೆಯ 534 ಅಂಗನವಾಡಿ ಕೇಂದ್ರಗಳ ಪೈಕಿ 128 ಹೊಸದಾಗಿ ನಿರ್ಮಿಸುತ್ತಿದ್ದು ದುರಸ್ತಿಗೆ 12 ಸಾವಿರ ಮತ್ತು ನಿರ್ಮಾಣಕ್ಕೆ 14 ಸಾವಿರ ರೂ. ನೀಡಲಾಗುತ್ತಿದೆ. ಇದು ಸಾಕಾಗುತ್ತಿಲ್ಲ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತ ಮೋಹನ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ, ಇಲಾಖೆ ಉನ್ನತೀಕರಣಕ್ಕೆ ಸೂಚಿಸಿದರೆ ಹಲವೆಡೆ ಹೊಸ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಎರಡೂ ಇಲಾಖೆ ವಾಗ್ವಾದ ಆಲಿಸಿದ ಜಿಪಂ ಸಿಇಒ, ಸಭೆ ಕರೆದು ಚರ್ಚಿಸುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.

ಕರೊನಾಗೆ ತಲೆ ಕೆಡಿಸಿಕೊಳ್ಳಬೇಡಿ: ಕರೊನಾ ಲಕ್ಷಣ, ಮುಂಜಾಗ್ರತಾ ಕ್ರಮ ಮತ್ತು ಚಿಕಿತ್ಸೆ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ಎಂ.ಯೋಗೀಶ್‌ಗೌಡ ಪವರ್ ಪಾಯಿಂಟ್ ಪ್ರೆಸೆಂಟೇಷನ್ ನೀಡಿದರು. ಕಾಯಿಲೆ ನಿಯಂತ್ರಣ ಮತ್ತು ಜಾಗೃತಿಗೆ ಅಗತ್ಯ ಸಹಕಾರ ನೀಡಲು ವಿವಿಧ ಇಲಾಖೆಗಳಿಗೆ ಮನವಿ ಮಾಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಅಧ್ಯಕ್ಷರು, ಹೆಚ್ಚಿನ ಉಷ್ಣಾಂಶ ಇರುವುದರಿಂದ ಈ ಭಾಗದಲ್ಲಿ ಸೋಂಕು ಹರಡುವುದಿಲ್ಲ. ಆದರೂ ಸುಮ್ಮನೆ ಭಯ ಬೀಳಿಸಲಾಗುತ್ತಿದೆ. ಎಲ್ಲೆಡೆ ವ್ಯಾಪಾರ ಮಂಕಾಗಿದೆ. ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ. ಇದಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಜನರಿಗೆ ವಾಸ್ತವಾಂಶ ತಿಳಿಸಬೇಕು ಎಂದರು. ಸ್ಥಳೀಯವಾಗಿ ಕಾಡುತ್ತಿರುವ ಎಚ್1 ಎನ್1, ಡೆಂಘೆ, ಚಿಕೂನ್‌ಗುನ್ಯಾ, ಕಾಲರಾ ಸೇರಿ ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆ ತಡೆಯಲು ಸೂಚಿಸಿದರು.