ಜಿಲ್ಲೆ

ಶುದ್ಧ ನೀರಿಗಾಗಿ ಗ್ರಾಮಸ್ಥರ ಅಲೆದಾಟ

ಕೋಲಾರ: ತಾಲೂಕಿನ ತೊಟ್ಲಿ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಾಗಿದ್ದು, ಗ್ರಾಮಸ್ಥರು ಶುದ್ಧ ನೀರಿಗಾಗಿ ಪಕ್ಕದ ಊರುಗಳನ್ನು ಅವಲಂಬಿಸುವಂತಾಗಿದೆ.

ಗ್ರಾಮದಲ್ಲಿ 350ಕ್ಕೂ ಅಧಿಕ ಕುಟುಂಬಗಳಿದ್ದು, ಜನ ಶುದ್ಧ ಕುಡಿಯುವ ನೀರಿಗಾಗಿ ಆರ್‌ಒ ಘಟಕವನ್ನೇ ಅವಲಂಬಿಸಿದ್ದರು. ಪಕ್ಕದ ಚಿಟ್ನಹಳ್ಳಿಯಿಂದ 20ಕ್ಕೂ ಹೆಚ್ಚು ಕುಟುಂಬದವರು ತೊಟ್ಲಿಯ ಆರ್‌ಒ ಘಟಕದಿಂದ ನೀರು ತೆಗೆದುಕೊಂಡು ಹೋಗುತ್ತಿದ್ದರು.

ಐದಾರು ವರ್ಷಗಳ ಹಿಂದೆ ಸ್ಥಾಪಿಸಿದ್ದ 2000 ಲೀಟರ್ ಸಾಮರ್ಥ್ಯದ ಆರ್‌ಒ ಘಟಕದ ಸ್ಟೀಲ್ ಡ್ರಮ್‌ನಲ್ಲಿ ನೀರು ನಿಲ್ಲುತ್ತಿಲ್ಲ. ನೀರು ಶುದ್ಧೀಕರಿಸುವ ಯಂತ್ರ ದುರ್ಬಲಗೊಂಡು ಕಾರ್ಯನಿರ್ವಹಿಸುತ್ತಿಲ್ಲ. ಬೋರ್‌ವೆಲ್ ನೀರು ಗೃಹ ಬಳಕೆಗೆಗಷ್ಟೇ ಯೋಗ್ಯ, ಆದ್ದರಿಂದ ಗ್ರಾಮಸ್ಥರು ಶುದ್ಧ ನೀರಿಗಾಗಿ ಪಕ್ಕದ ಕಾಕಿನೆತ್ತ ಅಥವಾ ಚಿಟ್ನಹಳ್ಳಿಕ್ಕೆ ಹೋಗುವಂತಾಗಿದೆ.

ಆರ್‌ಒ ಘಟಕ ಸ್ಥಾಪನೆ ಗುತ್ತಿಗೆ ಪಡೆದ ಕಂಪನಿಗಳು ಘಟಕವನ್ನು 5 ವರ್ಷಗಳ ಅವಧಿಗೆ ನಿರ್ವಹಿಸಿ ನಂತರ ಗ್ರಾಪಂಗೆ ಹಸ್ತಾಂತರಿಸಬೇಕಿದೆ. ಈ ಸಂಬಂಧ ಇಲಾಖೆ ಹಾಗೂ ಕಂಪನಿ ನಡುವೆ ಒಪ್ಪಂದ ಆಗಿರುತ್ತದೆ. ಸುಗಟೂರು ಹೋಬಳಿ ವ್ಯಾಪ್ತಿಯ 10 ಹಳ್ಳಿಗಳಿಗೆ ಆರ್‌ಒ ಘಟಕಗಳ ಅಳವಡಿಕೆಯ ಗುತ್ತಿಗೆಯನ್ನು ಒರಿಸ್ಸಾ ಮೂಲದ ಕಂಪನಿ ಗುತ್ತಿಗೆ ಪಡೆದಿತ್ತು. ತೊಟ್ಲಿ ಗ್ರಾಮದಲ್ಲಿ ಅಳವಡಿಸಿರುವ ಘಟಕದ ನಿರ್ವಹಣೆ ಅವಧಿ ಮುಗಿದಿದ್ದು, ಪ್ರತಿ ತಿಂಗಳ 16ನೇ ತಾರೀಖಿನಂದು ಕರೆನ್ಸಿ ರಿಚಾರ್ಜ್ ಮಾಡಲು ಬರುತ್ತಿದ್ದ ಸಿಬ್ಬಂದಿಯೂ ಇತ್ತ ಸುಳಿದಿಲ್ಲ.

ಆರ್‌ಒ ಘಟಕ ದುರಸ್ತಿಯಾಗಿರುವ ಬಗ್ಗೆ ಗ್ರಾಮಸ್ಥರು ಗ್ರಾಪಂ ಗಮನಕ್ಕೆ ತಂದಿದ್ದಾರೆ. ಪಿಡಿಒ ರಜೆ ಮೇಲೆ ತೆರಳಿದ್ದಾರೆ. ಆಡಳಿತ ಮಂಡಳಿ ತಲೆ ಕೆಡಿಸಿಕೊಂಡಿಲ್ಲ. ಪ್ರಭಾರ ಪಿಡಿಒ ಕಡೆಯಿಂದ ನಿರೀಕ್ಷಿತ ಪ್ರಯತ್ನ ಆಗಿಲ್ಲ. ಹೀಗಾಗಿ ಗ್ರಾಮಸ್ಥರು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಜೆಇ ಮುನೇಂದ್ರ ಗಮನಕ್ಕೆ ತಂದಾಗ ಗುತ್ತಿಗೆ ಅವಧಿ ಮುಗಿದಿದೆ, ಗ್ರಾಪಂನಿಂದಲೇ ದುರಸ್ತಿ ಮಾಡಿಸಿ, ನೀರಿನಿಂದ ಸಂಗ್ರಹವಾಗುವ ಹಣ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಆದರೆ ಘಟಕವನ್ನು ಪಂಚಾಯಿತಿಗೆ ಹಸ್ತಾಂತರಿಸಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ಹಂತದಲ್ಲಿ ಆಗಬೇಕಿರುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ. ಇಚ್ಛಾಶಕ್ತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಕಾಣುತ್ತಿಲ್ಲವಾದ್ದರಿಂದ ಗ್ರಾಮಸ್ಥರು ನೀರಿಗಾಗಿ ಊರೂರು ಅಲೆಯುವುದು ತಪ್ಪಿಲ್ಲ.

ಆರ್‌ಒ ಘಟಕ ಕೆಟ್ಟು ಹೋಗಿ ಹತ್ತು ದಿನಗಳಾದರೂ ಗಮನಹರಿಸುತ್ತಿಲ್ಲ. ಗ್ರಾಮಸ್ಥರು ನೀರಿಗೆ ಪಕ್ಕದ ಚಿಟ್ನಹಳ್ಳಿ, ಕಾಕಿನೆತ್ತಕ್ಕೆ ಹೋಗುವಂತಾಗಿದೆ. ಗುತ್ತಿಗೆ ಅವಧಿ ಮುಗಿದಿರುವುದರಿಂದ ಘಟಕ ನಿರ್ವಹಿಸುವವರಿಲ್ಲ. ಈ ಕೂಡಲೇ ಘಟಕವನ್ನು ಗ್ರಾಪಂ ಹಸ್ತಾಂತರಿಸಿಕೊಂಡು ದುರಸ್ತಿಪಡಿಸಬೇಕು. ಟಿ.ವಿ.ರಮೇಶ್, ತೊಟ್ಲಿ ಗ್ರಾಮಸ್ಥ ಆರ್‌ಒ ಘಟಕ ಅಳವಡಿಸಿರುವ ಸಂಸ್ಥೆಯು 5 ವರ್ಷ ನಿರ್ವಹಣೆ ಮಾಡಬೇಕು, ಗುತ್ತಿಗೆ ಅವಧಿ ಮುಗಿದಿದ್ದಲ್ಲಿ ಗ್ರಾಪಂಗೆ ಹಸ್ತಾಂತರಿಸುವ ಕೆಲಸವನ್ನು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಎನ್.ವಿ.ಬಾಬು, ತಾಪಂ ಇಒ, ಕೋಲಾರ