ಜಿಲ್ಲೆ

ಶುದ್ಧ ನೀರಿಗಾಗಿ ಅರಸೀಕೆರೆಯಲ್ಲಿ ಪರದಾಟ ; 2 ತಿಂಗಳಾದರೂ ಸರಿಯಾಗದ ನೀರಿನ ಘಟಕ

ತುಮಕೂರು: 2 ತಿಂಗಳ ಹಿಂದೆ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಈವರೆಗೆ ದುರಸ್ತಿ ಮಾಡಿಸದೆ ಪಾವಗಡ ತಾಲೂಕಿನ ಅರಸಿಕೇರೆ ಗ್ರಾಪಂ ನಿರ್ಲಕ್ಷೃ ವಹಿಸಿದೆ. ಹಾಗಾಗಿ, ಪ್ರತಿನಿತ್ಯ ಶುದ್ಧ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ.

ಪಾವಗಡ ತಾಲೂಕಿನ ಅರಸೀಕೆರೆಯಲ್ಲಿ 3500-4000 ಜನಸಂಖ್ಯೆಯಿದ್ದು, ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. 2013-14ರಲ್ಲಿ ಪ್ರಾರಂಭಿಸಿರುವ ಶುದ್ಧ ಕುಡಿಯುವ ನೀರನ ಘಟಕ 2 ತಿಂಗಳ ಹಿಂದೆ ಕೆಟ್ಟಿದ್ದು, ಈವರೆಗೆ ಯಾರೊಬ್ಬರೂ ಇತ್ತ ಕಡೆ ತಲೆಹಾಕಿಲ್ಲ. ಇದರಿಂದಾಗಿ ಗ್ರಾಮದಲ್ಲಿರುವ ಇನ್ನೊಂದು ಶುದ್ಧ ನೀರಿನ ಘಟಕದಲ್ಲಿ ಜನದಟ್ಟಣೆಯಿದ್ದು, ವಿದ್ಯುತ್ ಕೈಕೊಟ್ಟಲ್ಲಿ ಜನ ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಫ್ಲೋರೈಡ್ ನೀರು: ಪಾವಗಡ ತಾಲೂಕಿನಲ್ಲಿ ಅಂತರ್ಜಲ ಪಾತಾಳಕ್ಕೆ ಸೇರಿದ್ದು, ಫ್ಲೋರೈಡ್ ನೀರಿನ ಸಮಸ್ಯೆಯನ್ನು ಜನ ಸಾಕಷ್ಟು ರೋಗರುಜಿನಿಗಳಿಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಜನರಿಗೆ ಕುಡಿಯಲಿಕ್ಕೆ ಯೋಗ್ಯ ನೀರು ಪೂರೈಸುತ್ತಿದೆ. ಆದರೆ, ಇತ್ತೀಚೆಗೆ ಶುದ್ಧ ನೀರಿನ ಘಟಕಗಳು ನಿರ್ವಹಣೆಯಿಲ್ಲದೆ ಜನರಿಗೆ ಯೋಗ್ಯ ನೀರು ದೊರೆಯದಂತಾಗಿದೆ. ಅರಸೀಕೆರೆಯಲ್ಲಿ ಎರಡು ಶುದ್ಧ ನೀರಿನ ಘಟಕಗಳಿದ್ದು, ಎಸ್‌ಬಿಐ ಬ್ಯಾಂಕ್ ಮುಂಭಾಗದ ಘಟಕವು ಎರಡು ತಿಂಗಳ ಹಿಂದೆ ಕೆಟ್ಟಿದೆ. ಅಗಸರಕಟ್ಟೆಯಲ್ಲಿರುವ ಘಟಕದ ಮೇಲೆ ಇಡೀ ಊರಿನ ಜನ ಅವಲಂಬಿಸುವಂತಾಗಿದೆ. ಗ್ರಾಪಂ ಸಿಬ್ಬಂದಿ ಈ ಬಗ್ಗೆ ಜಾಣ ಮೌನವಹಿಸಿದ್ದಾರೆ. ಹತ್ತಾರು ಬಾರಿ ದೂರು ನೀಡಿದ್ದರೂ ಈವರೆಗೆ ತಾಪಂ ಇಒ ಆಗಲಿ ಯಾರೊಬ್ಬರೂ ಸ್ಪಂದಿಸಿಲ್ಲ.

ಎಸ್‌ಬಿಐ ಬ್ಯಾಂಕ್ ಮುಂಭಾಗದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಎರಡು ತಿಂಗಳಾಗಿದೆ. ಈವರೆಗೆ ಗ್ರಾಪಂ ಸಿಬ್ಬಂದಿ ಸರಿಪಡಿಸಲು ಮುಂದಾಗಿಲ್ಲ. ಇದರಿಂದ ಜನ ಕುಡಿಯುವ ನೀರಿಗಾಗಿ ಪ್ರತಿನಿತ್ಯ ಪರದಾಡುವಂತಾಗಿದೆ. ಯಾರಿಗೆ ದೂರು ಕೊಟ್ಟರು ಪ್ರಯೋಜನವಾಗಿಲ್ಲ. ಜನಾರ್ದನ್ ಜೆಡಿಎಸ್ ಮುಖಂಡ ಶುದ್ಧ ನೀರಿನ ಘಟಕದ ಮೋಟಾರ್ ಕೆಟ್ಟಿದೆ. ಸಂಬಂಧಪಟ್ಟ ಇಂಜಿನಿಯರ್‌ಗೆ ಮಾಹಿತಿ ನೀಡಿದ್ದೇನೆ. 4-5 ದಿನಗಳಲ್ಲಿ ಘಟಕ ಸರಿಪಡಿಸಲು ಕ್ರಮವಹಿಸುವೆ. ರಾಮಾಂಜನಪ್ಪ ಪಿಡಿಒ, ಅರಸೀಕೆರೆ ಗ್ರಾಪಂ