ಜಿಲ್ಲೆ

ಶುದ್ಧ ಕುಡಿವ ನೀರಿನ ಘಟಕಕ್ಕೆ ರೆಡ್‌ಸಿಗ್ನಲ್, ಖಾಸಗಿ ಪ್ರಾಯೋಜಿಕತ್ವಕ್ಕೆ ಜಿಪಂ ಮೊರೆ ಬೇಸಿಗೆಯಲ್ಲಿ ಎದುರಾಗಲಿದೆ ನೀರಿನ ಸಮಸ್ಯೆ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಹೊಸದಾಗಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆಗೆ ಸರ್ಕಾರ ಅನುಮತಿ ನಿರಾಕರಿಸಿದೆ ಎನ್ನಲಾಗಿದ್ದು, ಬರಪೀಡಿತ ಗ್ರಾಮಾಂತರ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿವ ನೀರಿಗೆ ಪರದಾಟ ಎದುರಾಗುವ ಆತಂಕ ಎದುರಾಗಿದೆ.

ಹೌದು. ಪ್ರಸಕ್ತ ಸಾಲಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಬಗ್ಗೆ ಸರ್ಕಾರದಿಂದ ಅನುಮತಿ ಅಥವಾ ನಿರ್ದೇಶನ ಬಂದಿಲ್ಲ ಎನ್ನಲಾಗಿದ್ದು, ಪರಿಣಾಮವಾಗಿ ಬೇಸಿಗೆಯಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಹೇಗೆಂಬ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಯಾವುದೇ ನದಿಮೂಲವಿಲ್ಲದ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಸಾಮಾನ್ಯ ಬಳಕೆ ನೀರಿಗೆ ಹಾಹಾಕಾರ ಸ್ಥಿತಿ ನಿರ್ಮಾಣವಾಗುತ್ತದೆ. ಇದರೊಂದಿಗೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುವುದರಿಂದ ಗ್ರಾಮೀಣ ಭಾಗದ ಜನರು ತೀವ್ರ ಆತಂಕಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಘಟಕಗಳ ನಿರ್ಮಾಣಕ್ಕೆ ಜಿಪಂ ಖಾಸಗಿ ಪ್ರಾಯೋಜಕತ್ವದ ಮೂಲಕ ಮೊರೆ ಹೋಗಿದೆ ಎನ್ನಲಾಗಿದೆ.

ಕಲಷಿತ ಎಂದರಷ್ಟೆ ಹೊಸ ಘಟಕ:

ಗ್ರಾಮಗಳಲ್ಲಿನ ಕೊಳವೆಬಾವಿಗಳಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಸಾಬೀತಾದರೆ ಮಾತ್ರ ಹೊಸದಾಗಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲು ಸರ್ಕಾರ ನಿರ್ದೇಶನ ನೀಡಿದೆ. ಪ್ರಸ್ತುತ ಯಾವ ಗ್ರಾಮದಲ್ಲೂ ಇಂಥ ಸನ್ನಿವೇಶ ಕಂಡುಬಂದಿಲ್ಲ. ಆದ್ದರಿಂದ ಹೊಸದಾಗಿ ಘಟಕ ನಿರ್ಮಾಣ ಸಾಧ್ಯವಿಲ್ಲ ಎಂದು ಜಿಲ್ಲಾ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ.

ದುರಸ್ತಿಯಾದರೆ ದೇವರೇ ಗತಿ: ಇನ್ನು ಬೇಸಿಗೆಯಲ್ಲಿ ಜಲಮೂಲ ಕೊರತೆಯಿಂದ ಬಹಳಷ್ಟು ಕುಡಿವ ನೀರಿನ ಶುದ್ಧ ಘಟಕಗಳು ಕೆಟ್ಟಿ ನಿಲ್ಲುತ್ತವೆ, ತಕ್ಷಣ ಅವುಗಳ ದುರಸ್ತಿ ಕಾರ್ಯ ನಡೆಯುವುದಿಲ್ಲ. ಇದರಿಂದ ಸಾರ್ವಜನಿಕರು ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.

ಶುದ್ಧೀಕರಿಸುವ ಉಪಕರಣಗಳೇ ಹಾಳು: ಘಟಕಗಳಲ್ಲಿ ಪ್ರಮುಖವಾಗಿ ಶುದ್ಧೀಕರಣ ಮಾಡುವ ಉಪಕರಣಗಳೇ ದುರಸ್ತಿಗೆ ಬರುತ್ತಿವೆ. 1 ಗಂಟೆಗೆ ಸರಾಸರಿ 500 ಲೀಟರ್‌ನಷ್ಟು ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವಿರುವ ಈ ಉಪಕರಣಗಳು 15 ಸಾವಿರ ಲೀಟರ್‌ವರೆಗೆ ಶುದ್ಧೀಕರಿಸುವ ಸಾಮರ್ಥ್ಯ ಹೊಂದಿರುತ್ತವೆ. ಬಳಿಕ ಇವುಗಳನ್ನು ಬದಲಿಸಬೇಕು. ಇಲ್ಲವಾದರೆ ನೀರು ಶುದ್ಧೀಕರಣವಾಗದೆ ಘಟಕ ಕಾರ್ಯ ನಿಲ್ಲಿಸುತ್ತವೆ. ಒಂದೊಂದು ಉಪಕರಣಕ್ಕೂ ಸುಮಾರು 15 ಸಾವಿರ ರೂ.ವೆಚ್ಚವಾಗುತ್ತದೆ. ಅಲ್ಲದೆ ಕಾರಣಾಂತರಗಳಿಂದ ಎರಡ್ಮೂರು ದಿನ ಘಟಕ ನಿಲ್ಲಿಸಿದರೂ ಈ ಉಪಕರಣಗಳು ಹಾಳಾಗುತ್ತವೆ. ಅತ್ಯಂತ ನಾಜೂಕಿನಿಂದ ನಿರ್ವಹಣೆ ಮಾಡಿದರಷ್ಟೆ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಟ್ಯಾಂಕರ್ ನೀರಿಗೆ ಸಿದ್ಧಗೊಳ್ಳಬೇಕು: ಬೇಸಿಗೆಯಲ್ಲಿ ಘಟಕಗಳೂ ನೀರಿನ ಸಮಸ್ಯೆ ಎದುರಿಸುವ ಹಿನ್ನೆಲೆಯಲ್ಲಿ ಇಂಥ ಘಟಕಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪೂರ್ವ ಸಿದ್ಧತೆ ಕೈಗೊಳ್ಳಬೇಕಾಗಿದೆ, ಕಳೆದ ವರ್ಷ ಯಾವ ಭಾಗದಲ್ಲಿ ಹೆಚ್ಚು ನೀರಿನ ತೊಂದರೆ ಕಾಣಿಸಿಕೊಂಡಿತ್ತು ಎಂಬುದರ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳದ ಹೊರತು ಘಟಕಗಳು ಬಾಗಿಲು ಮುಚ್ಚಿಕೊಳ್ಳಬೇಕಾಗುತ್ತದೆ.

ಖಾಸಗಿ ಪ್ರಾಯೋಜಿಕತ್ವದಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆಗೆ ತೊಂದರೆ ಇಲ್ಲ. ಈಗಾಗಲೇ ಅಂಥ ಪ್ರಯತ್ನ ನಡೆದಿದೆ. ಮುಖ್ಯವಾಗಿ ಜಲಮೂಲ ಇರಬೇಕು. ಅಗತ್ಯವಿರುವ ಕಡೆಗಳಲ್ಲಿ ಖಾಸಗಿ ಪ್ರಾಯೋಜಿಕತ್ವದಲ್ಲಿ ಘಟಕಗಳ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ರವಿಕುಮಾರ್ ಜಿಪಂ ಸಿಇಒ ಕೊಳವೆಬಾವಿಗಳಲ್ಲಿ ನೀರಿನ ಮಾದರಿ ಕಲುಷಿತ ಎಂದು ಕಂಡುಬಂದಲ್ಲಿ ಮಾತ್ರ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆಗೆ ಅವಕಾಶವಿದೆ. ಇದರ ಹೊರತಾಗಿ ಪ್ರಸಕ್ತ ಸಾಲಿನಲ್ಲಿ ಘಟಕ ಸ್ಥಾಪನೆ ಬಗ್ಗೆ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಯೋಗೇಶ್ ಕಾರ್ಯಪಾಲಕ ಅಭಿಯಂತ, ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗ

ಒಟ್ಟು ಘಟಕಗಳು 603

ದೊಡ್ಡಬಳ್ಳಾಪುರ-189

ಹೊಸಕೋಟೆ -215

ದೇವನಹಳ್ಳಿ-100

ನೆಲಮಂಗಲ-99