ಹುಣಸಗಿ: ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರಿನಿಂದಾಗಿ ವಾಂತಿ-ಭೇದಿ ಹೆಚ್ಚಾಗಿದ್ದು, ನಿಯಂತ್ರಿಸಲು ಶುದ್ಧ ಕುಡಿವ ನೀರಿನ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಶುದ್ಧ ನೀರಿನಿಂದಲೇ ಸಾಂಕ್ರಾಮಿಕ ರೋಗ ಉಲ್ಬಣವಾಗುತ್ತಿದೆ. ಹೀಗಾಗಿ ನಿಷ್ಕ್ರಿಯಗೊಂಡ ಆರ್‌ಒ ಘಟಕದ ನಿರ್ವಹಣೆಗೆ ಅಂದಾಜು ವರದಿ ಸಲ್ಲಿಸಬೇಕು. ಚಾಲ್ತಿ ಇರುವ ಶುದ್ಧ ಕುಡಿವ ನೀರಿನ ಘಟಕಗಳನ್ನು ಸದ್ಬಳಿಕೆಯೊಂದಿಗೆ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಫೋನ್ ಬಂದ್ ಮಾಡದೆ ಜನರ ಕೆಲಸ ಮಾಡಬೇಕು. ತಾರತಮ್ಯವಿಲ್ಲದೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಗಾಗ ಸಭೆ ನಡೆಸಬೇಕು. ಕರ ವಸೂಲಿ ಬಾಕಿ ಹಣ ಪಡೆದು ಅಭಿವೃದ್ಧಿಗೆ ಶ್ರಮಿಸಬೇಕು. ಯಾವುದೇ ಸಮಸ್ಯೆ ಇದ್ದರೆ ಅಧಿಕಾರಿಗಳು ತಕ್ಷಣ ನನ್ನ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ನರೇಗಾದಡಿ ಪ್ರತಿಯೊಂದು ಕಾಮಗಾರಿಗಳ ಗುಣಮಟ್ಟ ಹಾಗೂ ನೈಜವಾಗಿ ಕೆಲಸ ಮಾಡಿಸಬೇಕು. ಪ್ರಮುಖವಾಗಿ ಸಿಸಿ ರಸ್ತೆ, ಚರಂಡಿ ಸೇರಿ ಅಗತ್ಯವಿರುವ ಮೂಲಸೌಕರ್ಯಗಳಿಗೆ ವಿನಿಯೋಗಿಸಬೇಕು. ೧೫ನೇ ಹಣಕಾಸಿನ ಅನುದಾನವು ಕ್ರಿಯಾಯೋಜನೆ ಪ್ರಕಾರ ಕೈಗೊಂಡ ಕಾಮಗಾರಿಗಳಿಗೆ ಸದ್ಬಳಿಕೆ ಮಾಡಬೇಕು. ದುರ್ಬಳಿಕೆ ಮಾಡಿದರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ತಾಕೀತು ಮಾಡಿದರು.
ತಾಪಂ ಇಒ ಬಸವರಾಜಯ್ಯ ಹಿರೇಮಠ, ತಾಲೂಕು ಯೋಜನಾಧಿಕಾರಿ ಸಿದ್ದನಗೌಡ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ಹೆಚ್ಚಿನ ಪ್ರಗತಿ ಸಾಧಿಸಿ
೨೦೨೩-೨೪ನೇ ಸಾಲಿನ ಕರ ವಸೂಲಾತಿ ಗುರಿ ಮತ್ತು ಸಾಧನೆ ಹಾಗೂ ೨೦೨೨-೨೩ನೇ ಸಾಲಿನ ೧೫ನೇ ಹಣಕಾಸು ಯೋಜನೆ ಭೌತಿಕ ಮತ್ತು ಆರ್ಥಿಕ ಪ್ರಗತಿ, ನರೇಗಾ ಗುರಿ, ಕುಡಿವ ನೀರು, ವಿವಿಧ ವಸತಿ ಯೋಜನೆ ಆಯ್ಕೆ ಗುರಿ ಸಾಧನೆ ಸೇರಿ ವಿವಿಧ ವಿಷಯಗಳ ಕುರಿತು ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ, ಇನ್ನೂ ಹೆಚ್ಚಿನ ಪ್ರಗತಿಗೆ ಶ್ರಮಿಸುವಂತೆ ಸೂಚಿಸಿದರು.
ಆ.೩೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಿದ್ದು, ಈ ಬಗ್ಗೆ ಫಲಾನುಭವಿಗಳಿಗೆ ಕಾರ‍್ಯಕ್ರಮದ ಪೂರಕ ಮಾಹಿತಿ ನೀಡಲು ಪ್ರತಿಯೊಂದು ಪಂಚಾಯಿತಿ ಅಧಿಕಾರಿಗಳು ಪ್ರೊಜೆಕ್ಟರ್ ಮೂಲಕ ನೇರವಾಗಿ ತಿಳಿಸಬೇಕು.
| ರಾಜಾ ವೆಂಕಟಪ್ಪ ನಾಯಕ ಶಾಸಕ