ವಡಗೇರಾ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಕೆಟ್ಟುನಿಂತ ಶುದ್ಧ ಕುಡಿವ ನೀರಿನ ಘಟಕ. 
ಜಿಲ್ಲೆ

ಶುದ್ಧ ಕುಡಿಯುವ ನೀರು ಮರೀಚಿಕೆ

ಖಾಜಾಹುಸೇನ್ ಕೋನಹಳ್ಳಿ ವಡಗೇರಾ: ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮೂಲ ಉದ್ದೇಶದಿಂದ ಸರ್ಕಾರ ತಾಲೂಕಿನಲ್ಲಿ ೭೭ ಶುದ್ಧ ನೀರಿನ ಘಟಕ ಮಂಜೂರು ಮಾಡಿಸಿದರೂ ಅವುಗಳ ನಿರ್ವಹಣೆ ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಟೆಂಡರ್ ಮೂಲಕ ೨೦೧೫-೧೬ನೇ ಸಾಲಿನಲ್ಲಿ ಕಾಡಂಗೇರಾ, ಕಂದಳ್ಳಿ, ಟೋಕಾಪುರ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಲು ಏಜೆನ್ಸಿ ಅವರಿಗೆ ನೀಡಲಾಗಿತ್ತು. ಆದರೆ ೭ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಏಜೆನ್ಸಿಯವರ ಐದು ವರ್ಷದ ಅವಧಿ ಪೂರ್ಣಗೊಂಡಿದ್ದರಿಂದ ಕಾಮಗಾರಿ ಪೂರ್ಣಗೊಳಿಸದೆ ಹೋಗಿದ್ದರೂ ಸಂಬಂಧಪಟ್ಟ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಕ್ಯಾರೆ ಎನ್ನದೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

೨೦೧೧-೧೨ನೇ ಸಾಲಿನಲ್ಲಿ ಬೊಮ್ಮನಳ್ಳಿ, ಗುಂಡಗುರ್ತಿ, ವಡಗೇರಾದಲ್ಲಿ ನೀರಿನ ಘಟಕ ಸ್ಥಾಪನೆಯ ಕೆಲಸ ಖಾಸಗಿ ಅವರು ಅರ್ಧಕ್ಕೆ ಬಿಟ್ಟು ಬಿಲ್ ಪಾವತಿಸಿಕೊಂಡು ಹೋಗಿದ್ದರಿಂದ ಸರ್ಕಾರದ ಅನುದಾನ ದುರುಪಯೋಗವಾಗಿದೆ. ಆದರೆ ಅಧಿಕಾರಿಗಳು ಮಾತ್ರ ಯಾವ ಕ್ರಮ ಕೈಗೊಳ್ಳದೆ ಇರುವುದು ಸಾಕಷ್ಟು ಅನುಮಾನ ಮೂಡಿಸಿದೆ.

ಗ್ರಾಮಸ್ಥರು ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜನರ ಆರೋಗ್ಯ ದೃಷ್ಟಿಯಿಂದ ಜನಪ್ರತಿನಿಧಿಗಳು ಹಾಗೂ ಮೇಲಧಿಕಾರಿಗಳು ತಕ್ಷಣ ಈ ಘಟಕಗಳು ದುರಸ್ತಿ ಮಾಡಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಒಕ್ಕೊರಲ ಒತ್ತಾಯವಾಗಿದೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟಕದ ಸುತ್ತಲೂ ಗಿಡ-ಗಂಟಿ ಬೆಳೆದು ಉಪಯೋಗಕ್ಕೆ ಬಾರದಂತಾಗಿದೆ.

| ಮಲ್ಲಿಕಾರ್ಜುನ ಪೂಜಾರಿ ಬಿಳ್ಹಾರ ಗ್ರಾಮಸ್ಥ

ಗ್ರಾಮೀಣ ಭಾಗದಲ್ಲಿ ಅಸ್ವಚ್ಛತೆ ವಾತಾವರಣ ನಿರ್ಮಾಣವಾಗುತ್ತಿದೆ. ಕಲುಷಿತ ನೀರು ಸೇವನೆಯಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ನೀರಿನ ಘಟಕಗಳನ್ನು ಸರಿಪಡಿಸಿ ಶುದ್ಧ ನೀರು ಒದಗಿಸಿಬೇಕು.
| ಮಲ್ಲಣ್ಣ ನೀಲಹಳ್ಳಿ ತಾಲೂಕು ಅಧ್ಯಕ್ಷ, ರೈತ ಸಂಘ ವಡಗೇರಾ

ವಡಗೇರಾ ತಾಲೂಕಿನ ಕೆಲ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಏಜೆನ್ಸಿ ಅವರು ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ನೀರಿನ ಘಟಕಗಳನ್ನು ಆದಷ್ಟು ಬೇಗ ದುರಸ್ತಿ ಮಾಡಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗುವುದು.
| ಬಸವರಾಜ ಐರೆಡ್ಡಿ
ಎಇಇ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಶಹಾಪುರ