ಯಳಂದೂರು: ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಅನೇಕ ಸಮಸ್ಯೆಗಳಿದ್ದು ಇಲ್ಲಿನ ಪಂಚಾಯಿತಿ ಇದನ್ನು ಬಗೆಹರಿಸುವಲ್ಲಿ ನಿರ್ಲಕ್ಷೃ ವಹಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಮೂಕಹಳ್ಳಿಗೆ ತೆರಳುವ ರಸ್ತೆಯಲ್ಲಿರುವ ಶನೈಶ್ಚರ ದೇಗುಲದ ಬಳಿಯ ಶುದ್ಧ ಕುಡಿಯುವ ನೀರಿನ ಘಟಕ ಕಳೆದ 7 ವರ್ಷಗಳಿಂದ ಹಾಗೂ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಒಂದು ವರ್ಷದಿಂದಲೂ ನಿರುಪಯುಕ್ತವಾಗಿದೆ. ಹಾಗಾಗಿ ಶುದ್ಧ ಕುಡಿಯುವ ನೀರನ್ನು ಸಂಗ್ರಹಿಸಲು ಪಕ್ಕದ ಹೊಂಗನೂರು ಗ್ರಾಮಕ್ಕೆ ತೆರಳುವ ಅನಿವಾರ್ಯತೆ ಇದೆ. ಶನೈಶ್ಚರ ದೇಗುಲದ ಬಳಿ ಇರುವ ನೀರಿನ ಘಟಕ ಊರಿಂದ ಹೊರಗಿದ್ದು ಇಲ್ಲಿರುವ ಬೆಲೆ ಬಾಳುವ ಪರಿಕರಗಳು ಕಳ್ಳಕಾಕರ ಪಾಲಾಗುತ್ತಿವೆ ಎಂಬುದು ಗ್ರಾಮದ ಎಲ್. ರಾಜಣ್ಣ, ದೇವರಾಜು ಸೇರಿದಂತೆ ಹಲವರ ದೂರಾಗಿದೆ.
ದೊಡ್ಡ ಪಂಚಾಯಿತಿಯಾಗಿದ್ದರೂ ನಿರ್ಲಕ್ಷ್ಯ: ಈ ಪಂಚಾಯಿತಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದೆ. ಇಲ್ಲಿ ನೂರಾರು ಕುಟುಂಬಗಳು ವಾಸವಾಗಿವೆ. ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಎರಡು ಘಟಕಗಳನ್ನು ನಿರ್ಮಾಣ ಮಾಡಲಾಗಿದ್ದರೂ ಎರಡೂ ಕೆಟ್ಟು ನಿಂತಿವೆ. ಈ ಬಗ್ಗೆ ಸಂಬಂಧಪಟ್ಟ ಪಂಚಾಯಿತಿಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮ ವಹಿಸಿಲ್ಲ. ಇವರು ನೀಡುವ ಭರವಸೆಗಳು ಹುಸಿಯಾಗಿದೆ.
ಗ್ರಾಮದಲ್ಲಿ ಅಶುಚಿತ್ವ: ಗ್ರಾಮದಲ್ಲಿ ಅನೈರ್ಮಲ್ಯವಿದೆ. ಕಂಡಕಂಡಲ್ಲಿ ಕಸವಿದ್ದು ಇದನ್ನು ಸೂಕ್ತ ವಿಲೇವಾರಿ ಮಾಡುತ್ತಿಲ್ಲ. ಇಲ್ಲಿನ ಚರಂಡಿಯಲ್ಲಿ ಹೂಳು ತುಂಬಿದೆ. ಕಸದ ರಾಶಿಗಳಿದ್ದು ಇದನ್ನು ವಿಲೇವಾರಿ ಮಾಡದೆ ಇಡೀ ಪ್ರದೇಶ ಗಬ್ಬು ನಾರುತ್ತಿದೆ. ಇಲ್ಲಿರುವ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಸುತ್ತಲೂ ಗಿಡ ಗಂಟಿಗಳು ಬೆಳೆದಿವೆ. ಇಲ್ಲಿಗೆ ತೆರಳಲು ರಸ್ತೆಯೇ ಇಲ್ಲವಾಗಿದೆ. ಇಲ್ಲಿನ ಸಿಬ್ಬಂದಿ ಈ ಕೇಂದ್ರದ ಬಾಗಿಲನ್ನು ತೆರೆಯುವುದೇ ಇಲ್ಲ. ಬದಲಿಗೆ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಾರೆ. ಈ ಕಟ್ಟಡ ಪಾಳು ಬಿದ್ದಿದ್ದು ಇದರ ನಿರ್ವಹಣೆಯಾಗುತ್ತಿಲ್ಲ. ಇದು ಹೀಗೆ ಮುಂದುವರಿದಲ್ಲಿ ಈ ಕಟ್ಟಡ ಶಿಥಿಲಗೊಳ್ಳುವ ಸಾಧ್ಯತೆ ಇದೆ. ಸರ್ಕಾರಿ ಸ್ವತ್ತು ಅಧಿಕಾರಿಗಳು, ನೌಕರರ ನಿರ್ಲಕ್ಷ್ಯದಿಂದ ಹಾಳಾಗುವ ಭೀತಿ ಇದೆ ಎಂಬುದು ಇಲ್ಲಿನ ಕುಮಾರಸ್ವಾಮಿ, ಬಸವಣ್ಣ, ಶಿವಣ್ಣ ಸೇರಿದಂತೆ ಅನೇಕರ ದೂರು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.
ಮಸಣಾಪುರ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದೆ. ಇದು ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾಗಿರುವ ಘಟಕವಾಗಿದೆ. ಇದರ ದುರಸ್ತಿಗೆ ಸಂಬಂಧಪಟ್ಟ ಏಜೆನ್ಸಿಗೆ ಮಾಹಿತಿ ನೀಡಲಾಗಿದ್ದು ಶೀಘ್ರದಲ್ಲೇ ಇದನ್ನು ದುರಸ್ತಿ ಮಾಡಲಾಗುವುದು. ಶನೈಶ್ಚರ ದೇಗುಲದ ಬಳಿ ಇರುವ ಕೇಂದ್ರವು ಗ್ರಾಮದಿಂದ ದೂರವಿದ್ದು ಇದರ ಬಳಕೆ ಮಾಡದೆ ಇದು ಸಂಪೂರ್ಣ ಹಾಳಾಗಿದ್ದು ಈ ಬಗ್ಗೆಯೂ ಕ್ರಮ ವಹಿಸಲಾಗುವುದು. ಗ್ರಾಮದ ಶುಚಿತ್ವಕ್ಕೆ ಆದ್ಯತೆ ನೀಡಲಾಗುವುದು.
ಮಮತಾ, ಪಿಡಿಒ, ಮಸಣಾಪುರ ಗ್ರಾಮ ಪಂಚಾಯಿತಿ