ವಿರಾಜಪೇಟೆ: ಪುರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಇತರೆಡೆಗಳಲ್ಲಿ ಶುಚಿತ್ವ ಇಲ್ಲದ ಹಾಗೂ ಕಂಪನಿಯ ಹೆಸರಿಲ್ಲದ ತಿಂಡಿ, ತಿನಿಸುಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ವಿರಾಜಪೇಟೆ ತಹಸೀಲ್ದಾರ್ ಅರ್ಚನಾ ಭಟ್ ಅವರು ಬುಧವಾರ ದಾಳಿ ನಡೆಸಿ ತಿಂಡಿ ತಿನಿಸುಗಳನ್ನು ವಶಕ್ಕೆ ಪಡೆದರು.
ವಿರಾಜಪೇಟೆ ಪಟ್ಟಣ ಸುತ್ತಮುತ್ತ ಶುಚಿತ್ವ ಇಲ್ಲದ ತಿಂಡಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ನೀಡಿದ ದೂರಿನನ್ವಯ ತಹಸೀಲ್ದಾರ್ ಖಾಸಗಿ ಬಸ್ ನಿಲ್ದಾಣದ ಪುರಸಭೆ ಮಳಿಗೆಯ ಮೇಲೆ ದಾಳಿ ನಡೆಸಿದ ಸಂದರ್ಭ ಅಸ್ಸಾಂ ಮೂಲದ ವ್ಯಕ್ತಿಗಳು ಪುರಸಭೆಯಿಂದ ಪರವಾನಗಿ ಪಡೆಯದೇ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುತ್ತಿದ್ದು ಕಂಡುಬಂದಿತು.
ಅವರನ್ನು ತಹಸೀಲ್ದಾರ್ ತರಾಟೆಗೆ ತೆಗೆದುಕೊಂಡಾಗ ಪಟ್ಟಣ ಪಂಚಾಯಿತಿಯ ಮಹಿಳಾ ಸದಸ್ಯರೊಬ್ಬರು ಮಾರಾಟ ಮಾಡುವಂತೆ ಅನುಮತಿ ನೀಡಿದ್ದಾರೆಂದು ಅವರ ದೂರವಾಣಿ ಸಂಖ್ಯೆಯನ್ನು ತಹಸೀಲ್ದಾರ್ ಅವರಿಗೆ ನೀಡಿದರು.
ಇನ್ನು ಮುಂದೆ ಈ ಸ್ಥಳದಲ್ಲಿ ಯಾರು ಅನುಮತಿ ಇಲ್ಲದೆ ತಿನಿಸುಗಳನ್ನು ಮಾರಾಟ ಮಾಡದಂತೆ ಸ್ಥಳದಲ್ಲಿ ಹಾಜರಿದ್ದ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಹಾಗೂ ಪುರಸಭೆ ಆರೋಗ್ಯ ಅಧಿಕಾರಿ ಕೋಮಲ ಅವರಿಗೆ ಆದೇಶ ನೀಡಿದರು.
ಪುರಸಭೆ ವ್ಯಾಪ್ತಿಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರಿಗೆ ತಿನಿಸುಗಳನ್ನು ಮಾರಾಟ ಮಾಡಲು ಮೌಖಿಕವಾಗಿ ಆದೇಶ ನೀಡಿ ಬೆಂಬಲ ವ್ಯಕ್ತಪಡಿಸಿದ ಪುರಸಭೆ ಮಹಿಳಾ ಸದಸ್ಯೆಯ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ಷೇಪವ್ಯಕ್ತಪಡಿಸಿದರು.
ನಂತರ ವಿರಾಜಪೇಟೆ ಮುಖ್ಯರಸ್ತೆಯ ಛತ್ರಕೆರೆ ಬಳಿ ಇರುವ ಹೋಟೆಲ್ ಒಂದರಲ್ಲಿ ಅಶುಚಿತ್ವ ಆಹಾರ ಹಾಗೂ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನನ್ವಯ ದಾಳಿ ನಡೆಸಿ ಅಶುಚಿತ್ವದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿ ಪರವಾನಗಿ ಇಲ್ಲದ ಹೋಟೆಲ್ ನಡೆಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ಸ್ಥಳದಲ್ಲಿಯೇ ಪತ್ತೆಯಾದ ತಂಬಾಕು ಪದಾರ್ಥಗಳನ್ನು ವಶಕ್ಕೆ ಪಡದುಕೊಳ್ಳುವಂತೆ ನಗರ ಠಾಣಾಧಿಕಾರಿ ಶ್ರೀಧರ್ ಅವರಿಗೆ ಸೂಚಿಸಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ತಹಸೀಲ್ದಾರ್ ಅರ್ಚನಾ ಭಟ್ ಅವರು ಪಟ್ಟಣದ ಸುತ್ತಮುತ್ತ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಅನಧಿಕೃತವಾಗಿ ತಿಂಡಿ, ತಿನಿಸುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರನ್ನು ಆಧರಿಸಿ ದಾಳಿ ನಡೆಸಿದಾಗ ಅಶುಚಿತ್ವ ಹಾಗೂ ಅವಧಿಯನ್ನು ತೋರಿಸದಂತಹ, ಯಾವುದೇ ಕಂಪನಿಯ ಹೆಸರಿಲ್ಲದ, ಪರವಾನಗಿ ಪಡೆಯದ ತಿಂಡಿ, ತಿನಿಸುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದ ಹಿನ್ನಲೆಯಲ್ಲಿ ಸುರಕ್ಷಾ ದೃಷ್ಟಿಯಿಂದ ಕೂಡಲೇ ಅವುಗಳನ್ನು ವಶಕ್ಕೆ ಪಡೆಯುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಎಂದರು.
ಈ ಸಂದರ್ಭ ಕಂದಾಯ ಪರಿವೀಕ್ಷಕ ಹರೀಶ್, ಪುರಸಭೆ ಆರೋಗ್ಯ ಅಧಿಕಾರಿ ಕೋಮಲಾ ಇತರರಿದ್ದರು.