ಜಿಲ್ಲೆ

ಶೀಲ ಶಂಕಿಸಿ ಪತ್ನಿ ಕೊಂದ ಪತಿ

ನಾಗಮಂಗಲ: ಪಟ್ಟಣದ ಟಿಬಿ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಪತ್ನಿಯ ಶೀಲ ಶಂಕಿಸಿ ಪತಿ ಆಕೆಯನ್ನು ಕೊಂದು ನಾಲ್ಕು ವರ್ಷದ ಮಗುವಿನೊಂದಿಗೆ ಪರಾರಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.


ಟಿಬಿ ಬಡಾವಣೆಯ ಮುಳುಕಟ್ಟೆ ರಸ್ತೆಯ ಆನಂದ-ಗಿರಿಜಮ್ಮ ದಂಪತಿ ಪುತ್ರಿ ಮಧುಶ್ರೀ(25) ಕೊಲೆಯಾದವರು. ಬೆಂಗಳೂರಿನಲ್ಲಿ ಫೋಟೋ ಎಡಿಟಿಂಗ್ ಕೆಲಸ ಮಾಡುತ್ತಿದ್ದ ತಾಲೂಕಿನ ದೇವಲಾಪುರ ಹೋಬಳಿಯ ಕರಡಹಳ್ಳಿ ಗ್ರಾಮದ ಮಂಜುನಾಥ್ ಎಂಬಾತನೇ ಪತ್ನಿಯನ್ನು ಕೊಲೆ ಮಾಡಿ ಮಗುವಿನೊಂದಿಗೆ ತಲೆಮರೆಸಿಕೊಂಡಿರುವ ಆರೋಪಿ.


ಬುಧವಾರ ಬೆಳಗ್ಗೆ ಮಧು ಎಂಬುವರು ಮನೆ ಬಳಿ ಬಂದು ನೋಡಿದಾಗ ಮಧುಶ್ರೀ ಕೊಲೆಯಾಗಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.


ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಲಕ್ಷ್ಮೀನಾರಾಯಣಪ್ರಸಾದ್, ಸಿಪಿಐ ನಿರಂಜನ್, ಪಟ್ಟಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಮತ್ತು ತಂಡ ಪರಿಶೀಲಿಸಿ ಮಾಹಿತಿ ಪಡೆದರು.
ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಮಧುಶ್ರೀ ತಾಯಿ ಗಿರಿಜಮ್ಮ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮಂಜುನಾಥ್‌ನನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ತಿಳಿಸಿದರು.