ಜಿಲ್ಲೆ

ಶೀತರೋಗಗಳ ದಾಂಗುಡಿ: ಹಬ್ಬದ ಹೊಸ್ತಿಲಲ್ಲಿ ಡೆಂಘ, ಅಸ್ತಮಾ, ಸೋಂಕು ಜ್ವರ ಏರಿಕೆ

| ಪಂಕಜ ಕೆ.ಎಂ. ಬೆಂಗಳೂರು

ಹೊಸದಾಗಿ ಕಾಣಿಸಿಕೊಂಡಿರುವ ಕರೊನಾ ಡೆಲ್ಟಾ ರೂಪಾಂತರಿ ಎವೈ 4.2 ವೈರಸ್ ಬಗ್ಗೆ ಆತಂಕ ಬೇಕಿಲ್ಲ ಎಂದು ತಜ್ಞರು ಭರವಸೆ ನೀಡಿರುವ ನಡುವೆಯೇ, ದೀಪಾವಳಿ ಹಬ್ಬದ ಹೊಸ್ತಿಲಿನಲ್ಲಿ ರಾಜ್ಯಾದ್ಯಂತ ಡೆಂಘ, ಚಿಕುನ್ ಗುನ್ಯಾ, ತೀವ್ರ ಉಸಿರಾಟದ ಸಮಸ್ಯೆ, ಶೀತಜ್ವರ ಮತ್ತು ಅಸ್ತಮಾದಂತಹ ಅನಾರೋಗ್ಯ ಉಲ್ಬಣಿಸಿದೆ.

ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಮಾಣ ತಗ್ಗಿರುವ ಹಿನ್ನೆಲೆಯಲ್ಲಿ ಶಾಲೆ ಸೇರಿದಂತೆ ಎಲ್ಲ ಚಟುವಟಿಕೆಗಳು ಹಿಂದಿನ ಸ್ಥಿತಿಗೆ ಮರಳಿವೆ. ಈ ನಡುವೆ ಹವಾಮಾನ ಬದಲಾವಣೆಯಿಂದಾಗಿ ತೀವ್ರ ತಲೆನೋವು, ಮೈಕೈನೋವು, ಕೆಮ್ಮು, ನೆಗಡಿ, ವೈರಾಣು ಜ್ವರ ಜನರನ್ನು ಬಾಧಿಸುತ್ತಿದ್ದು, ಒಮ್ಮೆ ಬಂದರೆ ಚಿಕಿತ್ಸೆ ಪಡೆದರೂ ರೋಗಿ ಸಂಪೂರ್ಣ ಚೇತರಿಸಿಕೊಳ್ಳಲು 10 ರಿಂದ 15 ದಿನಗಳು ಆಗುತ್ತಿದೆ. ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ವೈರಾಣು ಜ್ವರಗಳಿಂದ ಬಳಲುತ್ತಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.

ಹೆಚ್ಚಿದ ಅಸ್ತಮಾ: ನಿರಂತರ ಮಳೆ ತೇವಾಂಶ ಹೆಚ್ಚಿಸಿರುವ ಪರಿಣಾಮ ಅಸ್ತಮಾ ಪ್ರಕರಣಗಳು ದಿಢೀರ್ ಏರಿಕೆ ಕಂಡಿವೆ. ಬೆಂಗಳೂರು ನಗರ ಒಂದರಲ್ಲೇ 1 ತಿಂಗಳಲ್ಲಿ ಶೇ.30 ಅಸ್ತಮಾ ಪ್ರಕರಣ ವರದಿಯಾಗಿವೆ. ಅಗಸ್ಟ್​ನಲ್ಲಿ ತಗ್ಗಿದ್ದ ಅಸ್ತಮಾ ಸೆಪ್ಟೆಂಬರ್ ಹಾಗೂ ಅಕ್ಟೋಬರ್​ನಲ್ಲಿ ಏರಿಕೆಯಾಗಿದೆ. ಸೆಪ್ಟೆಂಬರ್​ನಲ್ಲಿ 5,826, ಅಕ್ಟೋಬರ್​ನಲ್ಲಿ 5,282 ಪ್ರಕರಣ ಪತ್ತೆಯಾಗಿವೆ. ಇವರಲ್ಲಿ ಮಹಿಳೆಯರೇ (ಸೆ. 3,429 ಹಾಗೂ ಅ. 2,649 ಮಹಿಳೆಯರು ಹಾಗೂ ಸೆ. 2,397 ಹಾಗೂ ಅ. 2,633 ಪುರುಷರು) ಹೆಚ್ಚಿದ್ದಾರೆ.

1,500 ಗಡಿ ದಾಟಿದ ಚಿಕುನ್ ಗುನ್ಯಾ: ರಾಜ್ಯದಲ್ಲಿ ಚಿಕುನ್ ಗುನ್ಯಾ ಉಲ್ಬಣಗೊಂಡಿದ್ದು, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,508 ಕ್ಕೆ ಏರಿಕೆಯಾಗಿದೆ. ಉತ್ತರ ಕನ್ನಡ ಮತ್ತು ರಾಯಚೂರು ಹೊರತುಪಡಿಸಿ ರಾಜ್ಯದ 28 ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ. ಕಲಬುರಗಿ 193, ಶಿವಮೊಗ್ಗ 170, ಕೋಲಾರ 130, ಮಂಡ್ಯ 111, ವಿಜಯಪುರ 110, ತುಮಕೂರು 108 ಹಾಗೂ ಯಾದಗಿರಿ 106 ಅಧಿಕ ಪ್ರಕರಣಗಳು ವರದಿಯಾಗಿವೆ.

35000 ಐಎಲ್​ಐ/ಸಾರಿ ಕೇಸ್ : ಕೋವಿಡ್ ಲಕ್ಷಣ ಹೊಂದಿರುವ ಶೀತಜ್ವರ (ಐಎಲ್​ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಕಡಿಮೆಯಾಗಿಲ್ಲ. ಕಳೆದ 6 ತಿಂಗಳಲ್ಲಿ ಬೆಂಗಳೂರಲ್ಲಿ (ಮೇದಿಂದ ಈವರೆಗೆ) 35 ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿದ್ದು, ಯುವ ಸಮೂಹವನ್ನು ಹೆಚ್ಚು ಬಾಧಿಸಿದೆ. ಕೋವಿಡ್ 2ನೇ ಅಲೆ ನಂತರದಲ್ಲಿ ಐಎಲ್​ಐ ಮತ್ತು ಸಾರಿ ಪ್ರಕರಣಗಳಿಂದ ಬಳಲಿದವರಲ್ಲಿ ಬಹುತೇಕರು 30-45 ವಯೋಮಾನದವರಾಗಿದ್ದಾರೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಪೋರ್ಟಲ್ ಮತ್ತು ಪಬ್ಲಿಕ್ ಹೆಲ್ತ್ ಆಕ್ಟಿವಿಟಿಸ್ ಸರ್ವಿಲೆನ್ಸ್ ಆಂಡ್ ಟ್ರಾ್ಯಕಿಂಗ್ (ಪಿಎಚ್​ಎಎಸ್​ಟಿ) ದತ್ತಾಂಶದ ಪ್ರಕಾರ ಐಎಲ್​ಐ ಮತ್ತು ಸಾರಿಗೆ ಒಳಗಾದವರಲ್ಲಿ 30-45 ವರ್ಷ ವಯೋಮಾನದವರಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣ ಹಾಗೂ 18-30 ವಯೋಮಾನದವರಲ್ಲಿ 7ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ನಿರಂತರ ಮಳೆ, ಹವಾಮಾನ ಬದಲಾವಣೆಯಿಂದಾಗಿ ಐಎಲ್​ಐ ಮತ್ತು ಸಾರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಹತ್ತು ದಿನಗಳಲ್ಲಿ ಬೆಂಗಳೂರಿನಲ್ಲಿ 1,419 ಕೇಸ್ ವರದಿಯಾಗಿವೆ. ಇವುಗಳಲ್ಲಿ ಕೋವಿಡ್ ದೃಢಪಟ್ಟಿಲ್ಲ. ಆದಾಗಿಯೂ 3ನೇ ಅಲೆ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಈ ಪ್ರಕರಣಗಳ ಕುರಿತು ವರದಿ ಮಾಡುವಂತೆ ಸೂಚಿಸಲಾಗಿದೆ. - ಡಾ. ಶ್ರೀನಿವಾಸ್, ಆರೋಗ್ಯಾಧಿಕಾರಿ, ಬೆಂಗಳೂರು ನಗರ ಜಿಲ್ಲೆ

ಎಚ್ಚರಿಕೆ ಕ್ರಮಗಳೇನು?

  • ಕುದಿಸಿ ಆರಿಸಿದ ನೀರು ಕುಡಿಯಬೇಕು.
  • ಹೊರಗಿನ ಆಹಾರ ಸೇವನೆ ನಿಯಂತ್ರಿಸಬೇಕು
  • ಮಾಸ್ಕ್, ಸಾಮಾಜಿಕ ಅಂತರ, ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು
  • ಮನೆಯ ಸುತ್ತಮುತ್ತ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು
  • ಬಿಸಿ ಹಾಗೂ ತಾಜಾ ಆಹಾರ ಸೇವಿಸಬೇಕು, ಹಣ್ಣು, ತರಕಾರಿ, ಸೊಪು್ಪ ಹೆಚ್ಚು ತಿನ್ನಬೇಕು.
  • ಮಸಾಲೆ ಹಾಗೂ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು
  • ಯಾವುದೇ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು
ಸಾಮಾನ್ಯವಾಗಿ ಐಎಲ್​ಐ ಮತ್ತು ಸಾರಿ ಪ್ರಕರಣ ಸೆಪ್ಟೆಂಬರ್ ಮತ್ತು ಅಕ್ಟೋಬರ್​ನಲ್ಲಿ ಅಧಿಕವಾಗಿರುತ್ತದೆ. ಕೋವಿಡ್​ಗೆ ಮುಂಚೆಯೂ ಈ ಪ್ರಕರಣ ವರದಿಯಾಗುತ್ತಿತ್ತು. ಕೋವಿಡ್ ಎರಡನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಈ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದ ಶೇ. 90 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಈಗ ಸೋಂಕು ಇಳಿಕೆಯಾದರೂ ನಿತ್ಯ 50ಕ್ಕೂ ಹೆಚ್ಚು ಐಎಲ್​ಐ ಮತ್ತು ಸಾರಿ ಪ್ರಕರಣಗಳು ವರದಿಯಾಗುತ್ತಿವೆ. | ಡಾ. ನಾಗರಾಜ್ ನಿರ್ದೇಶಕ, ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ

5000 ಗಡಿಯತ್ತ ಡೆಂಘ

ಸೊಳ್ಳೆಯಿಂದ ಹರಡುತ್ತಿರುವ ಜ್ವರಗಳ ಸಂಖ್ಯೆ ಏರಿಕೆಯಾಗಿದ್ದು, 10 ದಿನದಲ್ಲಿ 508 ಡೆಂಘ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 5 ಸಾವಿರ ಗಡಿಯತ್ತ ಸಮೀಪಿಸಿದೆ. ಬೆಂಗಳೂರು ನಗರ ಸೇರಿದಂತೆ 16 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಮೂರಂಕಿ ತಲುಪಿದೆ. ಒಟ್ಟು ಸೋಂಕಿತರ ಸಂಖ್ಯೆ 4,876ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ 3,823 ಮಂದಿ ಸೋಂಕಿನಿಂದ ಬಳಲಿದ್ದು, 5 ಮಂದಿ ಮೃತಪಟ್ಟಿದ್ದರು. ಬೆಂಗಳೂರು ನಗರದಲ್ಲಿ ಅತೀ ಹೆಚ್ಚು 848 ಪ್ರಕರಣ ವರದಿಯಾಗಿವೆ. ಕಲಬುರಗಿಯಲ್ಲಿ 369, ಶಿವಮೊಗ್ಗದಲ್ಲಿ 338, ಉಡುಪಿಯಲ್ಲಿ 312, ಕೊಪ್ಪಳದಲ್ಲಿ 241, ದಕ್ಷಿಣ ಕನ್ನಡದಲ್ಲಿ 229, ಬಳ್ಳಾರಿಯಲ್ಲಿ 227, ವಿಜಯಪುರದಲ್ಲಿ 223, ದಾವಣಗೆರೆಯಲ್ಲಿ 209, ಹಾವೇರಿಯಲ್ಲಿ 187, ಮಂಡ್ಯದಲ್ಲಿ 183, ಚಿತ್ರದುರ್ಗದಲ್ಲಿ 128, ಗದಗದಲ್ಲಿ 127, ಬೀದರ್​ನಲ್ಲಿ 127, ತುಮಕೂರಿನಲ್ಲಿ 124 ಹಾಗೂ ಯಾದಗಿರಿಯಲ್ಲಿ 122 ಮಂದಿ ಡೆಂಘಪೀಡಿತರಾಗಿದ್ದಾರೆ.