ಜಿಲ್ಲೆ

ಶೀಘ್ರವೇ ಮನೆಗಳ್ಳರ ಬಂಧನ: ಎಸ್‌ಪಿ

ಹಾಸನ: ಬೇಲೂರು ತಾಲ್ಲೂಕಿನ ಮುದಿಗೆರೆ ಗ್ರಾಮದ ಒಂಟಿ ಮನೆಗೆ ನುಗ್ಗಿ ಪಿಸ್ತೂಲ್‌ನಿಂದ ಬೆದರಿಸಿ ಚಿನ್ನಾಭರಣ ದೋಚಿರುವ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜಿತಾ ಅವರು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.3 ರಂದು ಸಂಜೆ ರವಿ ಎಂಬುವರ ಮನೆಗೆ ಅಪರಿಚಿತರಿಬ್ಬರು ನುಗ್ಗಿ, ಮನೆಯ ಗೋಡೆಗೆ ಗುಂಡು ಹಾರಿಸಿ ರವಿ ಅವರ ಪತ್ನಿ ಶ್ರುತಿ, ಅತ್ತೆ ಚಂದ್ರಮ್ಮ ಅವರು ಧರಿಸಿದ್ದ ಓಲೆ, ಮಾಂಗಲ್ಯ ಸರ ಸೇರಿ ಒಟ್ಟು 14 ಗ್ರಾಂ. ಚಿನ್ನಾಭರಣ ಬಿಚ್ಚಿಸಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಹೇಳಿದರು.
ಆರೋಪಿಗಳು 20 ರಿಂದ 24 ಪ್ರಾಯದವರಾಗಿದ್ದಾರೆ ಎಂಬುವು ತಿಳಿದು ಬಂದಿದೆ. ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗುವುದು. ಪ್ರಕರಣ ನಂತರ ಈ ಗ್ರಾಮದ ಸುತ್ತ ಮುತ್ತ ಪೊಲೀಸ್ ಗಸ್ತು ವಾಹನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಒಂಟಿ ಮನೆ ಇರುವೆಡೆ ಬೀಟ್ ಪೊಲೀಸರು ತೆರಳಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.