ಶ್ರೀರಂಗಪಟ್ಟಣ: ತಾಲೂಕಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗೌಡಹಳ್ಳಿ ಗೇಟ್ ಬಳಿ ಶೀಘ್ರವೇ ಕೆಳಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುತ್ತಿದ್ದು, ಈ ಕುರಿತು ಹೆದ್ದಾರಿ ನಿರ್ಮಾಣ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚಿಸಿದ್ದಾರೆ.
ತಾಲೂಕಿನ ಗಣಂಗೂರು ಟೋಲ್ ಪ್ಲಾಜಾ ಕೇಂದ್ರಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಸಿದ್ದರಾಮಯ್ಯ ಅವರು, ಟೋಲ್ ಪ್ಲಾಜಾ ಕಾರ್ಯವೈಖರಿ ಹಾಗೂ ಇಲ್ಲಿನ ವ್ಯವಸ್ಥೆ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ, ಗೌಡಹಳ್ಳಿ ಗೇಟ್ ಬಳಿ ಉಂಟಾಗುತ್ತಿರುವ ಅಪಘಾತ ತಪ್ಪಿಸಲು ಹಾಗೂ ಗ್ರಾಮಸ್ಥರ ಅನೂಕೂಲಕ್ಕಾಗಿ ಶೀಘ್ರವೇ ಕೆಳಸೇತುವೆ ನಿರ್ಮಾಣಕ್ಕೆ ಸೂಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ವಾಹನ ಅಪಘಾತಗಳ ನಿಯಂತ್ರಣಕ್ಕಾಗಿ ರಸ್ತೆ ಸಂಚಾರ ನಿಯಮ ಚಿಹ್ನೆ ಫಲಕಗಳು, ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ, ವಾಹನಗಳ ವೇಗ ನಿಯಂತ್ರಣ ಪತ್ತೆ ಹಚ್ಚುವ ಕ್ಯಾಮರಾಗಳ ಅಳವಡಿಕೆ ಹಾಗೂ 120 ಕಿ.ಮೀ. ವ್ಯಾಪ್ತಿಯಲ್ಲಿ 4 ಗಸ್ತುವಾಹನ, 4 ಆಂಬುಲೆನ್ಸ್, 4 ಕ್ರೇನ್, 4 ಪರಿಶೀಲನಾ ವಾಹನಗಳನ್ನು ಶೀಘ್ರವೇ ನಿಯೋಜಿಸುವ ಕುರಿತು ಎಕ್ಸ್‌ಪ್ರೆಸ್ ವೇ ಪ್ರಾಜೆಕ್ಟ್ ಡೈರೆಕ್ಟರ್ ಅರ್ಚನಾ ಹಾಗೂ ಮೈಸೂರು ವಿಭಾಗದ ಪಿಡಿ ರಾಹುಲ್, ಆರ್‌ಒ ವಿವೇಕ್ ಜಸ್ವಾಲ್ ಅವರು ಸಿಎಂಗೆ ಮಾಹಿತಿ ನೀಡಿದರು.
ಸಚಿವ ಎಚ್.ಸಿ.ಮಹದೇವಪ್ಪ, ಶಾಸಕರಾದ ಎ.ಬಿ.ರಮೇಶ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ಎಡಿಜಿಪಿ ಅಲೋಕ್ ಕುಮಾರ್ ಇತರರಿದ್ದರು.