ಜಿಲ್ಲೆ

ಶೀಘ್ರದಲ್ಲೇ ತೆಂಗು ಮೇಳ ; ಕಲ್ಪವೃಕ್ಷ ಕೃಷಿ ಮಾಹಿತಿಯ ಕಾರ್ಯಾಗಾರ ಸದ್ಯದಲ್ಲೇ ದಿನಾಂಕ ಘೋಷಣೆ

ತುಮಕೂರು: ಕೇಂದ್ರ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನದಡಿ ತುಮಕೂರು ಜಿಲ್ಲೆ ತೆಂಗು ಉತ್ಪನ್ನಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತೆಂಗು ಬೆಳೆಯುವುದು, ವಿವಿಧ ಉತ್ಪನ್ನಗಳು, ಅಭಿವೃದ್ಧಿ, ಉತ್ಪಾದನೆ, ರೋಗನಿಯಂತ್ರಣ ಸೇರಿ ಹಲವು ವಿಷಯಗಳ ಬಗ್ಗೆ ಜಿಲ್ಲೆಯಲ್ಲಿ ತೆಂಗು ಕುರಿತ ಕಾರ್ಯಾಗಾರ, ಮೇಳ ಆಯೋಜಿಸುವ ಕುರಿತಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನೇತೃತ್ವದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ವೈ.ಎಸ್.ಪಾಟೀಲ, ರೈತರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಲು ಮೇಳ ಆಯೋಜಿಸಲಾಗುತ್ತಿದ್ದು, ದಿನಾಂಕ, ಸಮಯ, ಸ್ಥಳ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.

ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳನ್ನೊಳಗೊಂಡಂತೆ ಸ್ವಾಗತ ಸಮಿತಿ, ಪ್ರಚಾರ ಸಮಿತಿ, ಪ್ರದರ್ಶನ ಹಾಗೂ ಮಳಿಗೆ ಸಮಿತಿ, ಹಣಕಾಸು ಸಮಿತಿ ಹೀಗೆ ಹಲವು ಉಪಸಮಿತಿಗಳನ್ನು ರಚಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಮೇಳದಲ್ಲಿ ತಜ್ಞರಿಂದ ವಿಚಾರ ಸಂಕಿರಣ ಹಾಗೂ ತೆಂಗು ಆಧಾರಿತ ಉತ್ಪನ್ನಗಳ ಪ್ರದರ್ಶನ, ತೆಂಗು-ನಾರುಗಳ ಕೈಗಾರಿಕಾ ಸ್ಥಾಪನೆಗಿರುವ ಅವಕಾಶಗಳ ಬಗ್ಗೆ ಮಳಿಗೆಗಳನ್ನು ತೆರೆದು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಪ್ರದರ್ಶನಕ್ಕೆ ಬರುವ ರೈತರಿಗೆ, ಸಾರ್ವಜನಿಕರಿಗೆ ತೆಂಗು-ನಾರು, ಕೊಬ್ಬರಿ ಎಣ್ಣೆ, ಮಟ್ಟೆ, ಚಿಪ್ಪುಗಳ ಉಪಯೋಗಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಂತಾಗಬೇಕೆಂದ ಜಿಲ್ಲಾಧಿಕಾರಿ, ಕೃಷಿ ತೋಟಗಾರಿಕೆ, ಮಹಾನಗರ ಪಾಲಿಕೆ, ಟೂಡಾ ಸೇರಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ತೆಂಗು ಮೇಳ ಯಶಸ್ವಿಗೊಳಿಸುವಂತೆ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಸಾದ್, ಉಪನಿರ್ದೇಶಕ ರಘು, ನಬಾರ್ಡ್, ಹಿರೇಹಳ್ಳಿ ಕೆವಿಕೆ ಪ್ರತಿನಿಧಿಗಳು, ಅರಸೀಕೆರೆ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರತಿನಿಧಿಗಳು, ಜಿಲ್ಲಾ ಕೈಗಾರಿಕಾ ತರಬೇತಿ ಜಂಟಿ ನಿರ್ದೇಶಕ ನಾಗೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಅರಿವು ಮೂಡಿಸಲು ವೇದಿಕೆ: ತೆಂಗು ಹಾಗೂ ಅದರ ಉತ್ಪನ್ನಗಳ ಬಗ್ಗೆ ಪ್ರಚಾರ ಮತ್ತು ಪ್ರೋತ್ಸಾಹಿಸಲು ರಾಯಭಾರಿ ನೇಮಿಸುವುದು ಸೇರಿ ಪ್ರದರ್ಶನಕ್ಕೆ ಬರುವ ರೈತರಿಗೆ ವಿವಿಧ ತಳಿಯ ತೆಂಗು ಉತ್ಪನ್ನ ಮತ್ತು ತೆಂಗು ಕೈಗಾರಿಕೆ ಸ್ಥಾಪಿಸುವವರಿಗೆ ಮೇಳದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಹಾಗೂ ತೆಂಗು ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಮತ್ತು ಪ್ರಗತಿಪರ ರೈತರನ್ನು ಆಹ್ವಾನಿಸಿ ಅವರಿಂದ ರೈತರಿಗೆ ಅರಿವು ಮೂಡಿಸಲು ಮೇಳ ವೇದಿಕೆಯಾಗಬೇಕು ಎಂದು ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ ಆಶಿಸಿದರು.