ಅಮೃತ ಭಾರತ ನಿಲ್ದಾಣ ಯೋಜನೆ ಅಡಿಯಲ್ಲಿ ಪುನರಾಭಿವೃದ್ಧಿಗೊಂಡ ಬಾಗಲಕೋಟೆ ರೈಲ್ವೆ ನಿಲ್ದಾಣ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಲೋಕಾರ್ಪಣೆಗೊಳಿಸಿದರು.  
ಜಿಲ್ಲೆ

ಶೀಘ್ರದಲ್ಲಿ ಬಾಗಲಕೋಟೆಗೆ ವಂದೇ ಭಾರತ ರೈಲು

ಬಾಗಲಕೋಟೆ: ರಾಜ್ಯದ ೧೨ ಜಿಲ್ಲೆಗಳಲ್ಲಿ ಈಗಾಗಲೇ ವಂದೇ ಭಾರತ ರೈಲು ಸಂಚರಿಸುತ್ತಿದ್ದು, ಶೀಘ್ರದಲ್ಲಿಯೇ ವಿಜಯಪುರ-ಬಾಗಲಕೋಟೆ ಕೂಡಾ ವಂದೇ ಭಾರತ ರೈಲು ಸಂಚಾರ ಕಲ್ಪಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚ್ಯೂವಲ್ ವೇದಿಕೆ ಮೂಲಕ ಅಮೃತ ಭಾರತ ನಿಲ್ದಾಣ ಯೋಜನೆ ಅಡಿಯಲ್ಲಿ ಪುನರಾಭಿವೃದ್ಧಿಗೊಂಡ ದೇಶದ ೧೦೩ ರೈಲ್ವೆ ನಿಲ್ದಾಣಗಳ ಮತ್ತು ಇತರೆ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಕರ್ನಾಟಕಕ್ಕೆ ರೈಲ್ವೆ ವಿಚಾರದಲ್ಲಿ ಕೇಂದ್ರ ಸರ್ಕಾರ ಅನುದಾನ ಒದಗಿಸುತ್ತಿದೆ. ಉತ್ತರ ಕರ್ನಾಟಕ ಭಾಗದ ರೈಲ್ವೆ ಯೋಜನೆಗಳಿಗೆ ಅಂತಿಮ ಸ್ವರೂಪ ನೀಡಲು ಚಿಂತನೆ ನಡೆಸಲು ಮುಂದಾಗಿದೆ ಎಂದು ತಿಳಿಸಿದರು.

೧೪೨ ಕಿ.ಮೀ ಉದ್ದದ ಬಾಗಲಕೋಟೆ ಕುಡಚಿ ರೈಲು ೨೦೨೭ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು, ಗದಗ-ಹುಡಗಿ ಡಬಲಿಂಗ್ ಕಾರ್ಯ ಅಂತಿಮ ಹಂತದಲ್ಲಿದೆ, ಬಾದಾಮಿ, ಗುಳೇದಗುಡ್ಡ ಮೇಲ ಸೇತುವೆ ನಿರ್ಮಾಣ ಮಾಡಲಾಗುವುದು, ಆಲಮಟ್ಟಿ-ಚಿತ್ರದುರ್ಗ ಹೊಸ ರೈಲು ಮಾರ್ಗ ಡಿಪಿಆರ್ ಹಂತದಲ್ಲಿದೆ. ಬಾಗಲಕೋಟೆ -ಗಂಗಾವತಿ, ಆಲಮಟ್ಟಿ ಯಾದಗಿರಿ ಹೊಸ ರೈಲು ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರತಿಯೊಂದು ರೈಲು ನಿಲ್ದಾಣದಲ್ಲಿ ಅಂಗವಿಕಲರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂದ ಅವರು, ಕೇಂದ್ರ ಸರ್ಕಾರ ಉಗ್ರರರ ಚಟುವಟಿಕೆ ಹತ್ತಿಕಲು ದಿಟ್ಟ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಬಾಗಲಕೋಟೆ-ಕುಡಚಿ ಮಾರ್ಗ ತೀವ್ರಗತಿಯಲ್ಲಿ ಪ್ರಗತಿ ನಡೆದಿದೆ. ಇದರಿಂದ ಬಾಗಲಕೋಟೆಯ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದು, ಇಲ್ಲಿಯ ಉತ್ಪನ್ನಗಳಾದ ಸಕ್ಕರೆ ಸಿಮೆಂಟ್, ಇಳಕಲ್ಲ ಸೀರೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಬಾಗಲಕೋಟೆ ನಗರ ಆಗಾಧವಾಗಿ ಬೆಳೆಯುತ್ತಿದ್ದು, ಇಲ್ಲಿಯ ಕಾರ್ಮಿಕರು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಗುಜರಾತ ಮತ್ತು ರಾಜ್ಯಸ್ಥಾನಕ್ಕೆ ತೆರಳುತ್ತಿದ್ದು, ಅವರಿಗೆ ರೈಲು ಸೇವೆ ಒದಗಿಸಬೇಕು. ಬೆಂಗಳೂರಿನಿAದ ಹುಬ್ಬಳ್ಳಿಗೆ ಜನಶತಾಬ್ದಿ ಎಕ್ಸಪ್ರೇಸ್ ಸೇವೆ, ಗೋಲಗುಂಬಜ ಎಕ್ಸಪ್ರೇಸ್‌ನಲ್ಲಿ ೧ ಟೈಯರ್ ಎಸಿ, ೨ ಟೈಯರ ಎಸಿ ಕೋಚ್‌ಗಳು ಒಟ್ಟಿಗೆ ಇರುತ್ತಿದ್ದು, ಅವುಗಳನ್ನು ಪ್ರತ್ಯೇಕ ಮಾಡುವಂತೆ ಮನವಿ ಮಾಡಿದರು.

ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ರೈಲ್ವೆ ಇಲಾಖೆ ಇತ್ತೀಚಿನ ದಿನಗಳಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದು, ಮೊದಲು ರೈಲ್ವೆ ನಿಲ್ದಾಣಕ್ಕೆ ಬಂದಾಗ ದುರ್ವಾಸನೆ ಸ್ವಾಗತಿಸುತ್ತಿದ್ದು, ಇಂದು ಪ್ರಧಾನಮಂತ್ರಿಗಳ ಮುತುವರ್ಜಿಯಿಂದಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಭಾಗದ ಪ್ರಮುಖ ಯೋಜನೆಯಾದ ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಉಪಾಧ್ಯಕ್ಷೆ ಶೋಭಾ ರಾವ, ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯವಸ್ಥಾಪಕಿ ಬೆಲಾ ಮೀನಾ, ಜಿಲ್ಲಾಽಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ, ಬಾಗಲಕೋಟೆ ರೈಲ್ವೆ ನಿಲ್ದಾಣದ ಎಸ್‌ಆರ್ ಅರವಿಂದ ಹರ‍್ಲೇ ಸೇರಿದಂತೆ ಇತರರು ಉಪಸ್ಥಿತರಿದ್ದರು.