ಜಿಲ್ಲೆ

ಶೀಘ್ರದಲ್ಲಿ ಒಳಚರಂಡಿ ವ್ಯವಸ್ಥೆಗೆ ಚಾಲನೆ

ಗುಬ್ಬಿ: ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸುವ ಸಲುವಾಗಿ ಸೋಮವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದಿರುವುದಾಗಿ ಶಾಸಕ ಎಸ್​.ಆರ್​.ಶ್ರೀನಿವಾಸ್​ ತಿಳಿಸಿದರು. ಶನಿವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.

ಗುಬ್ಬಿ ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಹಳೆಯ ಸಂಖ್ಯೆ 206, ಈಗಿನ ಸಂಖ್ಯೆ 73ರನ್ನು ಅಭಿವೃದ್ಧಿ ಪಡಿಸಿ ವೈಟ್​ ಟ್ಯಾಪಿಂಗ್​ ಮಾಡಲು ಈಗಾಗಲೇ ಟೆಂಡರ್​ ಕರೆದು ಭೂಮಿ ಪೂಜೆಯೂ ನೆರವೇರಿದ್ದು, ಮೊದಲಿಗೆ ರಸ್ತೆಯನ್ನಷ್ಟೇ ಅಭಿವೃದ್ಧಿ ಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ನಾನು ಕೇಂದ್ರ ಸಚಿವ ಸೋಮಣ್ಣ ಅವರಲ್ಲಿ ವಿನಂತಿ ಮಾಡಿಕೊಂಡು ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಮಾಡಿಸಲು ಕೇಳಿಕೊಂಡಿದ್ದೇನೆ ಇದು ಆಗುತ್ತದೆ. ವಿದ್ಯುತ್​ ಕಂಬಗಳನ್ನು ಬದಲಾಯಿಸುವಂತೆ ಸೂಚಿಸಿದ್ದೇನೆ ಎಂದರು.

ಪಟ್ಟಣದ ಕೆಲವು ರಸ್ತೆಗಳು ಹಾಳಾಗಿದ್ದು, ಅವುಗಳನ್ನು ಸರಿಪಡಿಸುವಸಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಪಟ್ಟಣ ಪಂಚಾಯಿತಿ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ತಮ್ಮ ವಾರ್ಡ್​ನಲ್ಲಿ ನಾಗರಿಕರು ಹಣ ಸಂಗ್ರಹ ಮಾಡಿ ಮಾಡಿಸಿರುವ ಕೆಲಸಕ್ಕೆ ಅಧಿಕಾರಿಗಳು ಬಿಲ್​ ಮಾಡಿಕೊಂಡಿದ್ದರೆ ಎಂದು ಆಕ್ಷೇಪಿಸಿ ಸಭಾತ್ಯಾಗ ಮಾಡಿದರು.

ಸದಸ್ಯ ಸಿ.ಮೋಹನ್​ ಮಾತನಾಡಿ. ಹೆದ್ದಾರಿಯವರು ಸಿಮೆಂಟ್​ ರಸ್ತೆ ನಿಮಾರ್ಣ ಮಾಡುವಾಗ ಪಂಚಾಯಿತಿ ವತಿಯಿಂದ ಅಗೆದ್ದಿರುವ ಕುಡಿಯುವ ನೀರಿನ ಪೈಪ್​ಗಳನ್ನು ಬೇರೆಡೆಗೆ ಬದಲಾಯಿಸಲು ಗುತ್ತಿಗೆದಾರರಿಗೆ ತಿಳಿಸುವಂತೆ ತಿಳಿಸಿದರು.

ರಾಯವಾರ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ನಿತ್ಯ ಇಲ್ಲಿ ದ್ವಿಚಕ್ರ ವಾಹನ ಸವಾರರು ಆಘಾತಕ್ಕೀಡಾಗುತ್ತಾರೆ. ಬೇಗ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿದರು. ಕೆಲವು ವಾರ್ಡ್​ಗಳಲ್ಲಿ ಕುಡಿಯುವ ನೀರಿನ ನಲ್ಲಿಗಳು ಇಲ್ಲದಿರುವುದರಿಂದ ಹೊಸದಾಗಿ ಪೈಪ್​ಲೈನ್​ ಮಾಡಿಸಿ ಎಂದು ಸದಸ್ಯ ಕುಮಾರ್​ ಕೇಳಿದರು. ಬೀದಿ ಬದಿಯ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಒದಗಿಸಬೇಕೆಂದು ಸದಸ್ಯ ರೇಣುಕಾ ಪ್ರಸಾದ್​ ತಿಳಿಸಿದರು. ಪ್ರತಿ ವರ್ಷ ವ್ಯಾಪಾರಸ್ಥರಿಗೆ ನೀಡುವ ಟ್ರೇಡ್​ ಲೈಸೆನ್ಸ್​ ವಿಷಯ ಚರ್ಚೆಯಾಯಿತು.ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮಂಜುಳಾದೇವಿ ಗುಬ್ಬಿ ಪಟ್ಟಣದಲ್ಲಿ ಸುಮಾರು 600 ವಿವಿಧ ವ್ಯಾಪಾರದ ಅಂಗಡಿಗಳಿದ್ದು, ಇವರೆಲ್ಲಾ ಕಡ್ಡಾಯವಾಗಿ ಟ್ರೇಡ್​ ಲೈಸೆನ್ಸ್​ ಪಡೆಯಬೇಕೆಂದರು.

ಉಪಾಧ್ಯೆಕ್ಷೆ ಶ್ವೇತಾ, ಸದಸ್ಯರಾದ ಸಿದ್ದರಾಮಣ್ಣ, ಮಹಮದ್​ ಸಾದಿಕ್​, ಶಶಿ ಕುಮಾರ್​ಶೋಕತ್​ ಆಲಿ, ಮಮತಾ, ಮಂಗಳಮ್ಮ, ನಾಮಿನಿ ಸದಸ್ಯರಾದ ಅಮ್ಜ, ಆನಂದ್​ ಇದ್ದರು.