ಜಿಲ್ಲೆ

ಶೀಘ್ರದಲ್ಲಿ ಆಪ್ ಅಭ್ಯರ್ಥಿಗಳ ಆಯ್ಕೆ, ಅಮ್ ಆದ್ಮಿ ಪಾರ್ಟಿ ಕಾರ್ಯದರ್ಶಿ ರವಿಚಂದ್ರ ಹೇಳಿಕೆ

Dharwad

ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಮುಂತಾದ ವಿಷಯಗಳ ಕುರಿತು ಜಿಲ್ಲಾ ಸಂಚಾಲಕರು, ಪದಾಧಿಕಾರಿಗಳ ಜತೆ ಶೀಘ್ರ ಚರ್ಚೆ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ರವಿಚಂದ್ರ ನೆರಬೆಂಚಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರ ಕರ್ನಾಟಕ ಭಾಗದ ಚುನಾವಣೆ ಉಸ್ತುವಾರಿಯಾಗಿ ತಮ್ಮನ್ನು ಪಕ್ಷ ನೇಮಿಸಿದೆ. ದೆಹಲಿ ಮಾದರಿಯಲ್ಲಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ಜನರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಚಾರದಲ್ಲಿ ತೊಡಗಿದೆ. ಜನರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಜನಪ್ರತಿನಿಗಳು ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಾಂಗ್ರೆಸ್​ನವರು ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದರೂ ಉತ್ತಮ ಯೋಜನೆ ಪರಿಚಯಿಸಿಲ್ಲ. ಆದರೆ, ಇಲ್ಲಿ ಗ್ಯಾರಂಟಿ ಹೆಸರಲ್ಲಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ರೋಹನ ಐನಾಪುರ ಮಾತನಾಡಿ, ಶಿಕ್ಷಣ, ಆರೋಗ್ಯ, ರೈತರು, ಕಾರ್ವಿುಕರು ಹಾಗೂ ಯುವಕರ ಬೇಡಿಕೆಗಳನ್ನು ಒಳಗೊಂಡ 15 ಅಂಶಗಳ ಪ್ರಣಾಳಿಕೆಯನ್ನು ಮಾ. 20ರಂದು ಘೋಷಿಸಲಾಗುತ್ತಿದೆ. ಇವುಗಳನ್ನು ಈಡೇರಿಸುವ ಭರವಸೆಯೊಂದಿಗೆ ಚುನಾವಣೆ ಎದುರಿಸಲಾಗುವುದು ಎಂದರು.

ಪ್ರಣಾಳಿಕೆ ಸಿದ್ಧ ಪಡಿಸಲು ರಾಜ್ಯದ 224 ಕ್ಷೇತ್ರದಲ್ಲಿ ಸಂಚಾರ ಮಾಡಿ ಜನರ ಸಲಹೆ ಪಡೆಯಲಾಗುತ್ತಿದೆ. ಪಕ್ಷವು ‘ಜನರಿಂದ ಜನರಿಗಾಗಿ’ ಪ್ರಣಾಳಿಕೆ ಎಂಬ ವೆಬ್​ಸೈಟ್ ಅಭಿಯಾನ ಆರಂಭಿಸಿದೆ. ಪಕ್ಷದ ಟಿಕೆಟ್ ಆಕಾಂಕ್ಷಿಗಳು ಸ್ಥಳೀಯವಾಗಿ ಸಭೆ ನಡೆಸುವ ಮೂಲಕ ಹಾಗೂ ವೆಬ್​ಸೈಟ್​ನೊಂದಿಗೆ ಜನರ ಸಲಹೆ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದರು.

ಜನಸಾಮಾನ್ಯರು ನೀಡಿದ ಸಲಹೆ ಪರಿಶೀಲಿಸುವ ಮೂಲಕ ಆಪ್ ಉತ್ತಮ ಅಂಶಗಳ ಪ್ರಣಾಳಿಕೆ ತಯಾರಿಸಲು ವಿಜ್ಞಾನಿ ಅಶ್ವಿನಿ ಮಹೇಶ ಎಂಬುವರಿಗೆ ಹೊಣೆ ನೀಡಲಾಗಿದೆ. ರಾಷ್ಟ್ರೀಯ ಪಕ್ಷಗಳು ದೊಡ್ಡ ಹೋಟೆಲ್​ಗಳಲ್ಲಿ ಪ್ರಣಾಳಿಕೆ ಸಲಹೆ ಪಡೆದರೆ ಆಪ್ ಜನರ ಮಧ್ಯೆ ಹೋಗಿ ಸಲಹೆ ಪಡೆಯುತ್ತಿದೆ ಎಂದರು.

ಸಮಾವೇಶ ರೋಡ್ ಶೋ: ವಿಧಾನಸಭಾ ಚುನಾವಣೆಗೆ ಆಪ್ ಭರ್ಜರಿ ಪ್ರಚಾರ ಕೈಗೊಳ್ಳಲಿದೆ. ರಾಷ್ಟ್ರೀಯ ನಾಯಕರಾದ ಅರವಿಂದ ಕೇಜ್ರಿವಾಲ್, ಪಂಚಾಬ ಸಿಎಂ ಭಗವಂತ ಮಾನ್, ರಾಘವ್ ಛಡ್ಡಾ ಸೇರಿ ಅನೇಕ ನಾಯಕರು ಸ್ಥಳೀಯ ನಾಯಕರ ಪರ ಪ್ರಚಾರ ನಡೆಸಲಿದ್ದಾರೆ. ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ -ಧಾರವಾಡ ಹಾಗೂ ಗದಗದಲ್ಲಿ ಪ್ರಚಾರ ಅಂಗವಾಗಿ ಸಮಾವೇಶ, ರೋಡ್ ಶೋ ನಡೆಯಲಿವೆ. ಆಪ್ ನಾಯಕ ಮುಖ್ಯಮಂತ್ರಿ ಚಂದ್ರು ಅವರು ಇದರ ನೇತೃತ್ವ ವಹಿಸಲಿದ್ದಾರೆ ಎಂದು ರವಿಚಂದ್ರ ನೆರಬೆಂಚಿ ತಿಳಿಸಿದರು.

ಆಪ್ ಸಂಚಾಲಕ ಮಲ್ಲಿಕಾರ್ಜುನ ಹಿರೇಮಠ, ವಿಕಾಸ ಸೊಪ್ಪಿನ, ಬಸವರಾಜ ತೇರದಾಳ ಗೋಷ್ಠಿಯಲ್ಲಿದ್ದರು.