ತಿಪಟೂರು: ಕೃಷಿಕರು ಬೆಳೆದ ಉತ್ಪನ್ನಕ್ಕೆ ಅವರೇ ಬೆಲೆ ನಿಗದಿಪಡಿಸುವ ಶಕ್ತಿ ಬರುವವರೆಗೂ ಈ ದೇಶದಲ್ಲಿ ರೈತರ ಉದ್ಧಾರ ಸಾಧ್ಯವಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಿರುವ ನಂದಿನಿ ಕ್ಷೀರ ಭವನವನದ ಉದ್ಘಾಟನಾ ವೇದಿಕೆ ಕಾರ್ಯಕ್ರಮದಲ್ಲಿಮಾತನಾಡಿ, ಇಂದಿನ ದಿನಗಳಲ್ಲಿ ಕುಡಿಯುವ ನೀರಿಗಿಂತ ಹಾಲಿನ ಬೆಲೆ ಕಡಿಮೆ ಇದೆ. ಆದರೆ ರೈತರಿಗೆ ನೆರವಾಗುವ ಉದ್ದೇಶದಿಂದ ಸ್ವಲ್ಪ ಪ್ರಮಾಣದಲ್ಲಿ ಹಾಲಿನ ದರ ಹೆಚ್ಚಿಸಿದಾಕ್ಷಣ ಗ್ರಾಹಕರ ಮೇಲೆ ಬರೆ ಎಂದು ಆಕ್ರೋಶ ವ್ಯಕ್ತವಾಗುತ್ತದೆ ಎಂದ ಅವರು, ಸದ್ಯದಲ್ಲೇ ಹಾಲಿನ ದರ ಪರಿಷ್ಕರಣೆ ಆಗಲಿದೆ ಎಂದರು.
1905ರಲ್ಲಿ ಸ್ಥಾಪಿತವಾದ ಸಹಕಾರಿ ಕ್ಷೇತ್ರವನ್ನು ಶ್ರದ್ಧೆ, ನಿಷ್ಠೆಯಿಂದ ಬೆಳೆಸಲಾಗಿದೆ. ಬಲಾಢ್ಯರು ಮಾತ್ರ ಈ ಕ್ಷೇತ್ರಕ್ಕೆ ಬರಬೇಕು. ಇದನ್ನು ಅಷ್ಟು ಸುಲಭವಾಗಿ ಬೇರೆಯವರಿಗೆ ಬಿಟ್ಟುಕೊಡಲು ನಾನು ಸಿದ್ಧನಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೀರಭಾಗ್ಯ ಯೋಜನೆ ತರದೇ ಇದ್ದಿದ್ದರೆ ಒಕ್ಕೂಟಗಳಿಗೆ ಬೀಗ ಹಾಕಬೇಕಾಗಿತ್ತು ಎಂದರು.
ಸಂಘಕ್ಕೆ ಹಾಲು ಹಾಕುವ ರೈತರಿಗೆ ಸದಸ್ಯತ್ವ ನೀಡದಿರುವುದರ ಹಿಂದೆ ಎಲ್ಲಿ ಮತ ಹಾಕುವುದಿಲ್ಲವೋ ಎಂಬ ಸ್ವಹಿತಾಸಕ್ತಿ ಇದೆ. ಸಂಘದ ಅಥವಾ ವಿಎಸ್ಎಸ್ಎನ್ ಚುನಾವಣೆ ಸ್ಪರ್ಧಿಸಲು ಬಿ- ಫಾಮ್ರ್ ಅಗತ್ಯವಿಲ್ಲ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ, ಜಾತಿ, ಅಸೂಯೆಗೆ ಅವಕಾಶ ಇರಬಾರದು. ಮುಂದಿನ ದಿನಗಳಲ್ಲಿ ಎಲ್ಲ ಜಾತಿ, ಜನಾಂಗದವರಿಗೂ ಆಯ್ಕೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಲಾಟರಿ ಮೂಲಕ ಆಯ್ಕೆ ಮಾಡುವ ಪದ್ಧತಿ ಜಾರಿ ಬಗ್ಗೆ ರಾಜ್ಯಪಾಲರಿಗೆ ವಿಧೇಯಕ ಸಲ್ಲಿಸಲಾಗಿದೆ ಎಂದರು.
ಗೃಹಸಚಿವ ಜಿ.ಪರಮೇಶ್ವರ ಮಾತನಾಡಿ, 2013-&18ರಲ್ಲಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದ ಪರಿಣಾಮ ಶಾಲೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆ ಆಗುವ ಜತೆಗೆ ಮಕ್ಕಳಲ್ಲಿ ಪೌಷ್ಟಿಕಾಂಷದ ಕೊರತೆ ನೀಗಿದೆ. ನಿತ್ಯ 65 ಲಕ್ಷ ಲೀಟರ್ ನಂದಿನ ಹಾಲು ಈ ಯೋಜನೆಗೆ ಬಳಕೆಯಾಗುತ್ತಿದೆ. ಹಾಲಿನ ದರ ಏರಿಸುವ ಕುರಿತು ನಾಳೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಯಲಿದೆ ಎಂದರು.
ಹೈನೋದ್ಯಮ ಅಭಿವೃದ್ಧಿಗೆ ಶುದ್ಧ ಮೇವು, ಬೂಸಾ ಅಗತ್ಯವಾಗಿದೆ. ರಾಸುಗಳನ್ನು ಕಾಡುತ್ತಿರುವ ರೋಗ ನಿಮೂರ್ಲನೆ ಮತ್ತು ಇಡಿ ಜಿಲ್ಲೆಯಲ್ಲಿ ಶೈತ್ಯಾಗಾರ ಸ್ಥಾಪನೆಗೆ ಆದ್ಯತೆ ನೀಡಬೇಕಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಗೃಹಸಚಿವ ಜಿ.ಪರಮೇಶ್ವರ ಜಂಟಿಯಾಗಿ ನಂದಿನಿ ಕ್ಷೀರಭವನ ಉದ್ಘಾಟಿಸಿದರು.
ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಜಣ್ಣ; ಶಾಸಕ ಕೆ.ಷಡಕ್ಷರಿ ಅವರಿಗೆ ಮಂತ್ರಿಗಿರಿ ನೀಡಿ ಎಂಬ ಕಾರ್ಯಕರ್ತರ ಕೂಗಿಗೆ ಉತ್ತರಿಸಿದ ರಾಜಣ್ಣ, ಷಡಕ್ಷರಿ ಮೂರು ಬಾರಿ ಗೆದ್ದು, 3 ಬಾರಿ ಸೋತರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮಂತ್ರಿಮಂಡಲ ಆಯ್ಕೆ ಸಂದರ್ಭ ಅವರಿಗೆ ಶನಿವಾರ ಮಂತ್ರಿಗಿರಿ ಪಕ್ಕಾ ಆಗಿ ಸೋಮವಾರ ಘೋಷಿಸುವಷ್ಟರಲ್ಲಿ ನಿಮ್ಮ ಸ್ವಾಮಿಗಳ ಹಸ್ತಕ್ಷೇಪದಿಂದ ಮಂತ್ರಿಗಿರಿ ಕೈತಪ್ಪಿತು. ಇದಕ್ಕೆ ನಾವು ಕಾರಣರಲ್ಲ. ನಿಮ್ಮ ಸ್ವಾಮಿಗಳನ್ನೇ ಕೇಳಿ ಎಂದ ಸಚಿವ ರಾಜಣ್ಣ, ಇಂದು ಚುನಾವಣೆಗೆ ಗಾಂಧೀಜಿ ಸ್ಪರ್ಧಿಸಿದರೂ ಗೆಲ್ಲುವುದು ಕಷ್ಟ ಎಂದು ಬೇಸರು.
ಪ್ರತಿದಿನ ತುಮುಲ್ಗೆ 30ರಿಂದ 35 ಸಾವಿರ ಲೀಟರ್ ನೀರಿನಂಶ ಇರುವ ಹಾಲು ಸರಬರಾಜಾಗುತ್ತಿದೆ. ಒಕ್ಕೂಟ ಗಳಲ್ಲಿ ವಿನಾಕಾರಣ ಹೊರಗುತ್ತಿಗೆ ನೇಮಕಾತಿ ಅಥವಾ ದಿನಗೂಲಿ ನೌಕರರನ್ನು ನೇಮಿಸಿಕೊಂಡು ಒಕ್ಕೂಟಕ್ಕೆ ನಷ್ಟ ಉಂಟುಮಾಡಿದರೆ 29-ಸಿ ಮೂಲಕ ನನಗಿರುವ ಅಧಿಕಾರ ಬಳಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತೆ.
| ಕೆ.ಎನ್.ರಾಜಣ್ಣ ಸಹಕಾರಿ ಸಚಿವ
ಕೆ.ಷಡಕ್ಷರಿ ಪಕ್ಷನಿಷ್ಠೆ ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ತಿಪಟೂರು ಜಿಲ್ಲಾ ಕೇಂದ್ರ ಮಾಡಲು ಕೆ.ಷಡಕ್ಷರಿ ಒತ್ತಾಯ ಮಾಡುತ್ತಿದ್ದರೆ, ರಾಜಣ್ಣ ಮಧುಗಿರಿ ಜಿಲ್ಲಾ ಕೇಂದ್ರಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ವಿಷಯದಲ್ಲಿ ನನ್ನ ಮತ್ತು ರಾಜಣ್ಣನ ಮಧ್ಯ ಜಗಳ ತಂದಿಟ್ಟಿದ್ದಾರೆ. ಶಿರಾಕ್ಕೂ ಶಾಸಕ ಜಯಚಂದ್ರ ಬೇಡಿಕೆ ಇಟ್ಟಿದ್ದಾರೆ. ಒಟ್ಟರೆ ಇದು ಸರ್ಕಾರದ ಮಟ್ಟದಲ್ಲಿ ತಿರ್ಮಾಣವಾಗಬೇಕು.
| ಜಿ.ಪರಮೇಶರ ಗೃಹಸಚಿವ