ಜಿಲ್ಲೆ

ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸಿ

ಹನೂರು: ತಾಲೂಕಿನ ಬಂಡಳ್ಳಿ-ಹನೂರು ಮಾರ್ಗದಲ್ಲಿ 24.80 ಕೋಟಿ ರೂ.ವೆಚ್ಚದಲ್ಲಿ ಪ್ರಗತಿಯಲ್ಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಎಂ.ಆರ್.ಮಂಜುನಾಥ್ ಶನಿವಾರ ಪರಿಶೀಲಿಸಿದರು.

ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕ, ಈ ಮಾರ್ಗದ ರಸ್ತೆ ಹಲವು ವರ್ಷಗಳಿಂದಲೂ ತೀವ್ರ ಹಾಳಾಗಿತ್ತು. ಇದರಿಂದ ಜನರು ಸಂಚರಿಸಲು ತುಂಬಾ ತೊಂದರೆ ಅನುಭವಿಸುತ್ತಿದ್ದರು. ರಸ್ತೆ ಅಭಿವೃದ್ಧಿಪಡಿಸುವಂತೆ ಈ ಭಾಗದ ಜನರ ಮುಖ್ಯ ಬೇಡಿಕೆಯಾಗಿತ್ತು. ಇದನ್ನು ಮನಗಂಡು ಆದ್ಯತೆ ಮೇರೆಗೆ ಅಗತ್ಯ ಕ್ರಮವಹಿಸಿ ಸರ್ಕಾರದಿಂದ ಅನುದಾನ ತಂದು ರಸ್ತೆ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದರಿಂದ ಜನರು ಈವರೆಗೂ ಅನುಭವಿಸುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಕ್ಕಿದಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.

ಪಿಡಬ್ಲುೃಡಿ ಎಇಇ ಪುರುಷೋತ್ತಮ್, ಎಇ ಸುರೇಂದ್ರ, ಮುಖಂಡರಾದ ರವಿ, ಬಾಬು, ವಿಜಯಕುಮಾರ್, ಸೈಯದ್ ಬಸರತ್, ಮಹದೇವ ಮತ್ತಿತರರು ಹಾಜರಿದ್ದರು.