ಜಿಲ್ಲೆ

ಶೀಘ್ರ ಪರಿಹಾರ ವಿತರಿಸಲು ಆಗ್ರಹ

ಯಾದಗಿರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಭೀಮಾ-ಕೃಷ್ಣಾ ನದಿಗಳ ಪ್ರವಾಹದಿಂದ ಸಂಕಷ್ಟದಲ್ಲಿರುವ ಸಂತ್ರಸ್ಥರಿಗೆ ಕೂಡಲೇ ಸರ್ಕಾರ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದಿಂದ ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿ ಮಳೆ ಮತ್ತು ನೆರೆ ಪರಸ್ಥಿತಿ ಅಧ್ಯಯನ ಮಾಡಿದ್ದಾರೆ. ಇದರಿಂದ ವಾಸ್ತವ ಸಮಸ್ಯೆ ಅವರಿಗೆ ತಿಳಿದಿಲ್ಲ. ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದಿಂದ ನೂರಾರು ಕುಟುಂಬಗಳ ಮನೆಗಳು ನಾಶವಾಗಿವೆ. ಸರ್ಕಾರ ಮನೆ ನಿಮರ್ಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಯನ್ನು ಕೂಡಲೇ ಹಿಂತೆಗೆದಕೊಳ್ಳಬೇಕು. ಜಿಲ್ಲೆಗೆ ನೆರೆ ರಾಜ್ಯಗಳಿಂದ ಆಗಮಿಸಿರುವ ಭತ್ತ ಕಟಾವು ಯಂತ್ರಗಳ ಮಾಲೀಕರು ಅಗತ್ಯ ಹಣಕಿಂತ ಹೆಚ್ಚಾಗಿ ಬಾಡಿಗೆ ಪಡೆಯುತ್ತಿದ್ದಾರೆ. ಜಿಲ್ಲಾಡಳಿತ ಅದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಹಿಂಗಾರು ಹಂಗಾಮಿಗೆ ಶೇಂಗಾ ಬೀಜ ಮತ್ತು ರಸಗೊಬ್ಬರದ ಅವಶ್ಯಕತೆ ಇದೆ. ಅಲ್ಲದೆ ಪ್ರತಿ ಕ್ವಿಂಟಾಲ್ ಹತ್ತಿಗೆ 6 ಸಾವಿರ ಹಾಗೂ ಭತ್ತಕ್ಕೆ 3200 ರೂ.ಬೆಂಬಲ ಬೆಲೆಯ ಮೂಲಕ ಸರ್ಕಾರ ಖರೀದಿಗೆ ಮುಂದಾಗಬೇಕು. ಭತ್ತ, ಹತ್ತಿ, ತೊಗರಿ ಬೆಳೆಗಳಿಗೆ 2 ಕೆ.ಜಿಗೆ ಸೂಟ್ ಮುರಿಯುವುದನ್ನು ತಡೆಗಟ್ಟಿ ರೈತರಿಗೆ ಮೂಲಪಟ್ಟಿ ನೀಡಬೇಕು. ಕೃಷಿ ಕೂಲಿ ಕಾರ್ಮಿಕ ರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 150 ದಿನ ಕೆಲಸ ನೀಡಬೇಕು. ಸರ್ಕಾರ ಕೂಡಲೇ ಐಸಿಸಿ ಸಭೆ ಕರೆದು ಏಪ್ರಿಲ್ 10ರ ವರಗೆ ಕಾಲುವೆಗೆ ನೀರು ಹರಿಸಲು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಚನ್ನಪ್ಪ ಆನೆಗುಂದಿ, ಎಸ್.ಎಂ ಸಾಗರ್, ಹಣಮಂತ ಕೊಂಗಂಡಿ, ದಾವಲಸಾಬ್ ನದಾಫ್, ಚಂದ್ರಕಲಾ ವಡಿಗೇರಿ, ಗಣೇಶ ಅನವಾರ, ಶಿವರಾಜ, ಭೀಮರಾಯ ಯಡ್ಡಳ್ಳಿ, ಪಕೀರ್ ಅಹ್ಮದ್, ಚಂದ್ರಶೇಖರ ಚವ್ಹಾಣ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.