ಜಿಲ್ಲೆ

ಶೀಘ್ರ ಅಲ್ಪಸಂಖ್ಯಾತರ ರಾಜ್ಯ ಸಮಾವೇಶ-ಶಂಶುಲ್‌ಹಖ್ ಖಾನ್

ದಾವಣಗೆರೆ: ಜಾತ್ಯತೀತ ಜನತಾದಳ ಸಂಘಟನೆ ದೃಷ್ಟಿಯಿಂದ ದಾವಣಗೆರೆಯಲ್ಲಿ ಜನವರಿ 20ರ ಒಳಗಾಗಿ ದಾವಣಗೆರೆಯಲ್ಲಿ ಅಲ್ಪಸಂಖ್ಯಾತರ ರಾಜ್ಯ ಸಮಾವೇಶ ನಡೆಸಲಾಗುವುದು ಎಂದು ಪಕ್ಷದ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಕೆ. ಶಂಶುಲ್‌ಹಖ್ ಖಾನ್ ಹೇಳಿದರು.

ದಾವಣಗೆರೆಯಲ್ಲೇ ರಾಜ್ಯ ಸಮಾವೇಶ ನಡೆಸಲು ಒತ್ತಡವಿದೆ. ಹೀಗಾಗಿ ಪಕ್ಷದ ವರಿಷ್ಠರೊಂದಿಗೆ ಸಮಾಲೋಚಿಸಿ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಕ್ಷಕ್ಕೆ ಸಿ.ಎಂ. ಇಬ್ರಾಹಿಂ ಸೇರ್ಪಡೆ ಹಾಗೂ ನಂತರದ ಬೆಳವಣಿಗೆಯಿಂದಾಗಿ ಜೆಡಿಎಸ್‌ನತ್ತ ಶೇ.40ರಷ್ಟು ಅಲ್ಪಸಂಖ್ಯಾತರು ಒಲವು ತೋರುತ್ತಿದ್ದಾರೆ.ರಾಜ್ಯದಲ್ಲಿ ಈ ಹಿಂದೆ 300ರಿಂದ 3 ಸಾವಿರ ಮತಗಳ ಅಂತರದಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲುತ್ತಿದ್ದರು. ಇನ್ನು ಸೋಲುವ ವಾತಾವರಣವಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 123 ವಿಧಾನಸಭೆ ಗೆಲ್ಲುವ ನಿರೀಕ್ಷೆ ಹೊಂದಿದ್ದೇವೆ. ಪ್ರತಿ ಜಿಲ್ಲೆಗೆ ಕನಿಷ್ಟ 1ರಂತೆ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಕೋರಲಾಗುವುದು. ನೀರಾವರಿ ಸೌಲಭ್ಯಗಳ ಜಾರಿ ಕುಮಾರಸ್ವಾಮಿ ಅವರಿಂದ ಹೊರತಾಗಿ ಯಾರಿಂದಲೂ ಸಾಧ್ಯವಿಲ್ಲ. ಈಗಾಗಲೆ ಹಲವೆಡೆ ಪಂಚರತ್ನ ಯಾತ್ರೆ ನಡೆಸಲಾಗಿದೆ ಎಂದರು.

ರಾಜ್ಯದಲ್ಲಿ ಕಳೆದ 3-4 ವರ್ಷದಲ್ಲಿ ಸಿಎಎ, ಎನ್‌ಆರ್‌ಸಿ, ಜಟಕಾ ಕಟ್, ಹಿಜಾಬ್ ಮೊದಲಾದ ವಿಚಾರದಲ್ಲಿ ಮುಸ್ಲಿಂ ಸಮಾಜದ ಹೆಣ್ಣುಮಕ್ಕಳಿಗೆ ತೊಂದರೆಯಾಯಿತು. ಇದನ್ನು ಜಾರಿ ಮಾಡಿದ ಬಿಜೆಪಿಗಿಂತಲೂ, ಇದರ ವಿರುದ್ಧ ಧ್ವನಿ ಎತ್ತಬೇಕಿದ್ದ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಮೌನ ಮುರಿಯದಿದ್ದುದು ಹೆಚ್ಚು ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ದಾವಣಗೆರೆ ದಕ್ಷಿಣ ಮಾತ್ರವಲ್ಲ, ರಾಜ್ಯದ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆದ್ದು ಬರುವ ಸಾಮರ್ಥ್ಯ ಅವರಿಗಿದೆ ಎಂದ ಅವರು, ಹರಿಹರ ಸೇರಿ ದಾವಣಗೆರೆ ಜಿಲ್ಲೆಯಲ್ಲಿ ಕನಿಷ್ಟ 3 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಪಕ್ಷದ ರಾಜ್ಯ ಮುಖಂಡ ಜೆ.ಅಮಾನುಲ್ಲಾಖಾನ್ ಮಾತನಾಡಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿನ ಮುಸ್ಲಿಂ ಸಮಾಜದವರ ಬಗ್ಗೆ ಶಾಸಕರು ಹಗುರ ಹೇಳಿಕೆ ನೀಡಬಾರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಮೀರ್ ಅಹ್ಮದ್, ಟಿ. ಅಸ್ಗರ್, ಕಡತಿ ಅಂಜಿನಪ್ಪ, ಹಜಮತ್ ಉಲ್ಲಾ, ಹಖ್‌ಮಲ್ ಸಾಬ್, ಫಾರೂಕ್‌ಖಾನ್, ಮನ್ಸೂರ್ ಅಲಿ, ಜಬೀವುಲ್ಲಾ, ಜಾವಿದ್ ಪಾಷಾ ಇತರರಿದ್ದರು.