ಜಿಲ್ಲೆ

ಶಿಸ್ತುಬದ್ಧ ಜೀವನಕ್ಕೆ ಶಿಕ್ಷಕರೇ ಪ್ರೇರಣೆ

ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಡಾ.ನೀಲಗಿರಿ ತಳವಾರ್, ರಾಮಚಂದ್ರ, ಎಂ.ಪ್ರಕಾಶ್, ಮಾದಂಡ ತಿಮ್ಮಯ್ಯ ಇತರರಿದ್ದರು.

ವೀರಾಜಪೇಟೆ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಶಿಸ್ತುಬದ್ಧ ಜೀವನ ನಡೆಸಲು ಶಿಕ್ಷಕರೇ ಪ್ರೇರಣೆಯಾಗಿದ್ದಾರೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ ವೃತ್ತಿ ಸಮಾಜದಲ್ಲಿ ಹೆಚ್ಚಿನ ಜವಬ್ದಾರಿಯುತವಾದ ವೃತ್ತಿಯಾಗಿದೆ. ಜೀವನದುದ್ದಕ್ಕೂ ಹೇಗೆ ಬದುಕಬೇಕೆಂಬುದನ್ನು ಪ್ರತಿಯೊಬ್ಬರೂ ಶಿಕ್ಷಕರಿಂದ ಕಲಿಯುತ್ತಾರೆ. ಆಧುನಿಕತೆ, ಹೊಸ ಪೀಳಿಗೆ ಹಾಗೂ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಶಿಕ್ಷಕರು ಕೂಡ ನವೀನ ಮಾದರಿಯ ಬೋಧನ ಕ್ರಮವನ್ನು ಅನುಸರಿಸಬೇಕಾದ ಅಗತ್ಯವಿದೆ ಎಂದರು.

ಮೈಸೂರಿನ ಭಾರತೀಯ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ನೀಲಗಿರಿ ತಳವಾರ್ ಮಾತನಾಡಿದರು. ವಿರಾಜಪೇಟೆ ತಹಸೀಲ್ದಾರ್ ರಾಮಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್, ಶಿಕ್ಷಕರ ಕಲ್ಯಾಣ ಸಮಿತಿಯ ತಾಲೂಕು ಅಧ್ಯಕ್ಷ ಮಾದಂಡ ತಿಮ್ಮಯ್ಯ ಹಾಗೂ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಐಸಾಕ್ ರತ್ಮಾಕರ್ ಇದ್ದರು. ವಿರಾಜಪೇಟೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು.