ಚಾಮರಾಜನಗರ: ದೈಹಿಕ ಮತ್ತು ಮಾನಸಿಕ ಸದೃಢತೆಗೆ ಹಾಗೂ ಶಿಸ್ತುಬದ್ಧವಾದ ಜೀವನಕ್ಕೆ ಎನ್‌ಸಿಸಿ ಸಹಕಾರಿಯಾಗಿದೆ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ.ಎಚ್.ಜಿ.ಮಂಜುನಾಥ್ ಸಲಹೆ ನೀಡಿದರು.
ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಎನ್‌ಸಿಸಿ ಮೊದಲ ಬ್ಯಾಚ್ ೇರ್‌ವೆಲ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲೇ ಚಾಮರಾಜನಗರದ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಮಾತ್ರ ಎನ್‌ಸಿಸಿ ಇದ್ದು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಸಹಕಾರಿಯಾಗಿದೆ. ಯಾವುದೇ ವೃತ್ತಿಯಲ್ಲಾದರೂ ನಾಯಕತ್ವಗುಣ, ಒಗ್ಗಟ್ಟು ಹಾಗೂ ಶಿಸ್ತನ್ನು ಅಳವಡಿಸಿಕೊಳ್ಳಲು ಎನ್‌ಸಿಸಿ ನೆರವಾಗುತ್ತದೆ. ಇದನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವಲ್ಲಿ ಡಾ.ಮಾರುತಿ ಮತ್ತು ಲೋಲಾಕ್ಷಿ ಅವರ ಶ್ರಮ ಸಾಕಷ್ಟಿದೆ ಎಂದು ತಿಳಿಸಿದರು.
ವೈದ್ಯಕೀಯ ವೃತ್ತಿಯಲ್ಲಿ ಶಿಸ್ತು, ಸಂಯಮ ಮುಖ್ಯವಾಗುತ್ತದೆ. ಎನ್‌ಸಿಸಿ ಮೂಲಕ ಅದನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢ ದೇಹವನ್ನು ಹೊಂದಲು ಎನ್‌ಸಿಸಿ ತರಬೇತಿ ಅತ್ಯಂತ ಸಹಕಾರಿಯಾಗಿದೆ. ಸಿಮ್ಸ್ ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು, ಪ್ಯಾರಾಮೆಡಿಕಲ್ ಕಾಲೇಜುಗಳನ್ನು ಒಳಗೊಂಡಿದ್ದು, ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಹೋಗಲಾಗುತ್ತಿದೆ ಎಂದರು.
ಮೂಳೆ ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ.ಮಾರುತಿ ಮಾತನಾಡಿ, ಎನ್‌ಸಿಸಿಯಲ್ಲಿ ಎಂಬಿಬಿಎಸ್, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಇದ್ದಾರೆ. ಮುಂದಿನ ದಿನಗಳಲ್ಲಿ ಉದ್ಯೋಗ ಅವಕಾಶಗಳು ದೊರೆಯಲು ಎನ್‌ಸಿಸಿ ಸಹಕಾರಿಯಾಗಲಿದೆ. ಕಳೆದ 2 ವರ್ಷಗಳಿಂದ ಡೀನ್ ಡಾ.ಎಚ್.ಜಿ.ಮಂಜುನಾಥ್ ಅವರು ತುಂಬಾ ಪ್ರೋತ್ಸಾಹವನ್ನು ನೀಡಿದ್ದಾರೆ ಎಂದರು.
ಈ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಎನ್‌ಸಿಸಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ನಮ್ರತಾ, ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ರವಿ, ಡಾ.ತೃಪ್ತಿ, ಡಾ.ವೇದಶ್ರೀ, ಡಾ.ರಾಘವೇಂದ್ರ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು ಹಾಜರಿದ್ದರು.