ಚಿತ್ರದುರ್ಗ: ಪಾಲಕರು ಮಕ್ಕಳಿಗೆ ಶಿಸ್ತು, ಸಂಸ್ಕಾರ ಕಲಿಸಬೇಕು. ಅಲ್ಲದೆ, ವಿದ್ಯಾವಂತರನ್ನಾಗಿಸಿದಲ್ಲಿ ಪ್ರಗತಿ ಸಾಧ್ಯವಿದೆ ಎಂದು ಗುಳೇಗುಡ್ಡದ ಸದಾನಂದ ಶಿವಯೋಗಿ ಮಠದ ನಾಗಭೂಷಣ ಶ್ರೀ ಸಲಹೆ ನೀಡಿದರು.
ಪತ್ರಿಕಾ ಭವನದಲ್ಲಿ ಅಖಿಲ ಕರ್ನಾಟಕ ಕೊರಚ ಮಹಾಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಗುರು ನುಲಿಯ ಚಂದಯ್ಯ ಅವರ 917ನೇ ಜಯಂತಿಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಚಂದಯ್ಯರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಿ. ಜನಸಂಖ್ಯೆ ಎಷ್ಟಿದೆ ಎಂಬುದಕ್ಕಿಂತ ಸಮಾಜ ಸಂಘಟನೆ ಅತಿ ಮುಖ್ಯ. ಆಗ ಮಾತ್ರ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಮಹಾಸಂಘದ ಅಧ್ಯಕ್ಷ ಎಚ್.ಎನ್.ರಾಮಚಂದ್ರಪ್ಪ ಮಾತನಾಡಿ, ಸಂಘಟನೆ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಬೇಕಿದೆ. ಸೌಲಭ್ಯ ಪಡೆಯಲು ಹೋರಾಟ ಅನಿವಾರ್ಯ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ, ದೇಶದಲ್ಲಿ ನಮ್ಮ ಸಮಾಜ ನಿರ್ಲಕ್ಷಕ್ಕೆ ಒಳಗಾಗಿದೆ. ಯಾರೂ ಪರಿಗಣಿಸದ ಕಾರಣ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಸಲಹೆ ನೀಡಿದರು.
ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೂ ನುಲಿಯ ಚಂದಯ್ಯರ ಭಾವಚಿತ್ರ ಮೆರವಣಿಗೆ ನಡೆಯಿತು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಿಮ್ಮಣ್ಣ, ಮುಖಂಡರಾದ ರಾಮಮೂರ್ತಿ, ಗಂಗಾಧರ್, ನಾಗಪ್ಪ, ಕೊಟ್ರೇಶ್, ವಿಜಯಕುಮಾರ್, ಉಪನ್ಯಾಸಕ ನಾಗಪ್ಪ ಇತರರಿದ್ದರು.