ಜಿಲ್ಲೆ

ಶಿಸ್ತು, ಸಂಯಮ ರೂಢಿಸಿಕೊಳ್ಳಿ

ಕಲಬುರಗಿ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಸಚಿವ ಡಾ.ಬಿ.ಶರಣಪ್ಪ ಸಲಹೆ ನೀಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದಡಿ ಶುಕ್ರವಾರ ನಡೆದ ವಿಶ್ವವಿದ್ಯಾಲಯ ಮಟ್ಟದ ಅಂತರ್ ಮಹಾವಿದ್ಯಾಲಯಗಳ ಎನ್‌ಎಸ್‌ಎಸ್ ವಿಶೇಷ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಾತ್ಮಗಾಂಧೀಜಿಯವರ ಕನಸಿನ ಕೂಸಾದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಶಿಸ್ತು, ಸಂಯಮ ಹಾಗೂ ಸೇವಾ ಮನೋಭಾವನೆ ಬೆಳಸುತ್ತದೆ. ಜಾತಿ ಧರ್ಮ ಮೀರಿ ಮಾನವೀಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಭೂಕಂಪ ಸೇರಿದಂತೆ ತುರ್ತು ಸಂದರ್ಭದಲ್ಲಿ ಎನ್‌ಎಸ್‌ಎಸ್ ಸ್ವಯಂ ಸೇವಕರ ಸೇವೆ ಪ್ರಮುಖವಾಗಿದ್ದು, ರಾಷ್ಟ ರಕ್ಷಣೆ, ನಿರ್ಮಾಣದಲ್ಲಿ ನಿರಂತರ ತೊಡಗಿಸಿಕೊಳ್ಳಬೇಕು. ಭಾರತದಲ್ಲಿ ಮೂಢನಂಬಿಕೆಗೆ ಜನ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದ್ದು, ಇದನ್ನು ಕಿತ್ತೊಗೆಯಲು ಶ್ರಮಿಸಬೇಕು. ದೇಶದಲ್ಲಿ ಯುವಕರ ಪಾತ್ರ ಹಿರಿದು, ಹೀಗಾಗಿ ರಾಷ್ಟç ನಿರ್ಮಾಣದಲ್ಲಿ ಕೊಡುಗೆ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜನಾಧಿಕಾರಿ ಡಾ.ಎನ್.ಜಿ.ಕಣ್ಣೂರ್ ಮಾತನಾಡಿ, ಏಳು ದಿನಗಳ ಈ ಶಿಬಿರದಲ್ಲಿ ಕಲಿತಿರುವ ನೈತಿಕತೆ, ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಸಮಾಜ ನೀರ್ಮಾಣ ಮಾಡಬೇಕು ಎಂದರು.

ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಿಮ್ಮ ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸಹಹೋದರತ್ವ ಭಾವನೆ ಮೂಡುವಂತೆ ಶ್ರಮಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಗಳಾದ ಶಂಕರಪ್ಪಾ ಕಲಬುರಗಿ, ವಂಸಂತಕುಮಾರ ರಾಠೋಡ ಮತ್ತು ಡಾ. ಮಂಜುನಾಥ ಉಪಸ್ಥಿತರಿದ್ದರು. ಡಾ. ಸಂಗಪ್ಪಾ ಮಾಮನಶಟ್ಟಿ ನಿರೂಪಿಸಿದರು, ಡಾ. ಪಂಡಿತ ಬಿ.ಕೆ ಸ್ವಾಗತಿಸಿದರು ಮತ್ತು ಡಾ. ದೀಲಿಪ ಮಾಲೆ ವಂದಿಸಿದರು. ಶಿಬಿರಾರ್ಥಿಗಳಾದ ಪವನ್ ಮತ್ತು ಸಂಗಡಿಗರು ಎನ್‌ಎಸ್‌ಎಸ್ ಗೀತೆ ಹಾಡಿದರು.

ಶಿಬಿರಾರ್ಥಿಗಳಾದ ಶಿವಬಸವ ಮತ್ತು ಶಾರದಾ ಅನಿಸಿಕೆ ವ್ಯಕ್ತಪಡಿಸಿ, ನಿರಂತರ ಒಂದು ವಾರಗಳ ಕಾಲ ಮನೆಬಿಟ್ಟು ಕ್ಯಾಂಪಸ್‌ನಲ್ಲಿ ನಡೆದ ವಿಶೇಷ ಶಿಬಿರದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಸೇವಾ ಮನೋಭಾವ, ಸ್ವಚ್ಛತೆ, ಸಹೋದರತ್ವದ ಬಗ್ಗೆ ಮನವರಿಕೆಯಾಗಿದೆ. ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂಬುದು ತಿಳಿದಿದೆ. ಸ್ವ ಇಚ್ಛೆಯಿಂದ ವಿವಿಧ ಚಟುವಟಿಕೆಗಳಲ್ಲಿ ಖುಷಿಯಿಂದ ತೊಡಗಿಸಿಕೊಂಡಿದ್ದೆವು. ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಿತು. ಎನ್‌ಎಸ್‌ಎಸ್ ಅಧಿಕಾರಿಗಳು ಇಡಿ ಶಿಬಿರದಲ್ಲಿ ತುಂಬಾ ಸಹಕಾರ ನೀಡಿದರು ಎಂದು ಹೇಳಿದರು.