ಬೇಲೂರು: ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ದೇಶಭಕ್ತಿ ಮೂಡಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಸಹಕಾರಿ ಎಂದು ಹಾಸನದ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ.ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.
ಬೇಲೂರು ತಾಲೂಕಿನ ಎಂ.ಹುಣಸೇಕೆರೆ ಗ್ರಾಮದಲ್ಲಿ ಹಾಸನ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ, ಸಹಬಾಳ್ವೆ, ಸಹೋದರತ್ವ ಬೆಳೆಸಬಹುದು. ವಿವಿಧ ಜಾತಿ, ಧರ್ಮಗಳ ಜನರಿರುವ ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಒಂದಾಗಿ ಬದುಕುವ ಗುಣ ಬೆಳೆಸಿಕೊಳ್ಳಬಹುದು. ರೈತರ ಬದುಕನ್ನು ಅರಿತು ದುಡಿಯುವ ಮನೋಭಾವ ಹೊಂದಲು ಅವಕಾಶವಾಗುತ್ತದೆ. ಅಲ್ಲದೆ ಮಾನವೀಯ ಸಂಬಂಧಗಳು ಬೆಸೆಯುವುದರಿಂದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ ಎಂದರು.
ಕಸಾಪ ಮಾಜಿ ಗೌರವ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ ಮಾತನಾಡಿ, ರಾಷ್ಟ್ರೀಯ ಯೋಜನಾ ಶಿಬಿರಗಳು ಗ್ರಾಮದಲ್ಲಿನ ನೈರ್ಮಲ್ಯಕ್ಕೆ ಆದ್ಯತೆ ನೀಡುವುದರಿಂದ ಗ್ರಾಮಸ್ಥರ ಆರೋಗ್ಯ ಕಾಪಾಡಿದಂತಾಗುತ್ತದೆ ಎಂದರು.
ಹೆಬ್ಬಾಳು ಗ್ರಾಪಂ ಅಧ್ಯಕ್ಷ ಹಾಲೇಗೌಡ, ಸದಸ್ಯರಾದ ಅಮ್ಜಾದ್‌ಖಾನ್, ಶೋಭಾ, ಗ್ರಾಮಸ್ಥ ಗಿರೀಶ್, ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ವೈದ್ಯನಾಥ್, ಎಸ್‌ಡಿಸಿಎಂಸಿ ಅಧ್ಯಕ್ಷೆ ಲಕ್ಷ್ಮಮ್ಮ, ಸಹ ಪ್ರಾಧ್ಯಾಪಕಿ ಎಚ್.ಎಂ.ಶೀಲಾ, ಗಣೇಶ್, ಮಹೇಶ್ವರಿ, ಗಾನವಿ, ಚಾಂದನಿ, ಲೋಕೇಶ್, ಕಾವ್ಯಾ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವರುಣ್ ಇತರರು ಇದ್ದರು.