ಮೈಸೂರು: ಯುವ ಜನರು ಮೊಬೈಲ್‌ನಿಂದ ದೂರು ಇರುವ ಮೂಲಕ ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಪ್ರಥಮ ವರ್ಷ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಜನರ ಮೇಲೆ ಸಾಮಾಜಿಕ ಜಾಲತಾಣಗಳು ದುಷ್ಪರಿಣಾಮ ಬೀರುತ್ತಿವೆ. ಇದೀಗ ಅವರೇ ಮುಖ್ಯ ಟಾರ್ಗೆಟ್ ಆಗಿದ್ದಾರೆ. ಈ ತಾಣಗಳು ಅವರನ್ನೇ ಕೇಂದ್ರೀಕರಿಸಿವೆ. ಆದ್ದರಿಂದ ಮೊಬೈಲ್ ಬಳಕೆಯಿಂದ ದೂರು ಉಳಿಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಪರಿಶ್ರಮ ಹಾಕಬೇಕು ಎಂದರು.
ಸೈಬರ್ ಅಪರಾಧ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ ಎಂಬ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ವರದಿಯಿಂದ ತಿಳಿದುಬಂದಿದೆ. ಇದರ ಸಹಾಯವಾಣಿ ಸಂಖ್ಯೆ ‘1930’ಗೆ ನಿತ್ಯ 500 ಆನ್‌ಲೈನ್ ಸೈಬರ್ ದೂರುಗಳು ನಮಗೆ ಬರುತ್ತಿವೆ. ಆನ್‌ಲೈನ್ ಮೂಲಕ ಮಹಿಳೆಯರಿಗೆ ಅಸಭ್ಯ ಸಂದೇಶ, ಫೋಟೋ ಕಳುಹಿಸುವುದು ಸೇರಿದಂತೆ ಇನ್ನಿತರ ದೂರಗಳಿವೆ. ಆದರೆ ಇವುಗಳ ಕುರಿತು ಎಫ್‌ಐಆರ್ ದಾಖಲಿಸಲು ಹೆಣ್ಣು ಮಕ್ಕಳು ಹಿಂದೇಟು ಹಾಕುತ್ತಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಜೀವನ ಸುವರ್ಣ ಅವಧಿ. ಇದನ್ನು ಹಾಳು ಮಾಡಿಕೊಳ್ಳಬಾರದು. ಭವಿಷ್ಯದಲ್ಲಿ ಏನು ಆಗಬೇಕೆಂದು ಆಲೋಚಿಸಿ ಅದಕ್ಕೆ ಸಂಬಂಧಿಸಿದಂತೆ ಯೋಜನೆ ತಯಾರು ಮಾಡಿಕೊಂಡು, ಅದನ್ನು ಕಾರ್ಯಸಾಧಿಸಲು ಪರಿಶ್ರಮ ಹಾಕಬೇಕು ಎಂದರು.
ಪೈಪೋಟಿ ಬೇರೆಯವರೊಂದಿಗೆ ಅಲ್ಲ, ನಿಮ್ಮೊಂದಿಗೆ ಇರಲಿ. ಕೌಶಲ, ಸಂವಹನ, ವ್ಯಕ್ತಿತ್ವ ವಿಕಸನ, ಅಧ್ಯಯನ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಪೈಪೋಟಿ ಇರಲಿ ಎಂದು ಕಿವಿಮಾತು ಹೇಳಿದರು.
ಶಿಸ್ತು, ಗುರಿ ಮತ್ತು ಅಧ್ಯಯನ ಯೋಜನೆ ಇರಲಿ. ಶಿಸ್ತು ಬಹಳ ಮುಖ್ಯ. ಅದು ಸಣ್ಣ ಕೆಲಸದಿಂದಲೇ ಶುರುವಾಗಲಿ. ಶಿಸ್ತು ಇಲ್ಲದಿದ್ದರೆ ಜೀವನ ದುಸ್ಥಿತಿಯತ್ತ ಮುಖ ಮಾಡಲಿದೆ. ಗುರಿ ನಿಗದಿಪಡಿಸಿಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಬೇಕು. ದೌರ್ಬಲ್ಯ-ಶಕ್ತಿ ಕುರಿತು ಅರಿತುಕೊಂಡು ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಈಗಿನ ಯುವ ಜನರು ದಿನಪತ್ರಿಕೆ ಓದುತ್ತಿಲ್ಲ. ಓದುವ ಹವ್ಯಾಸವನ್ನು ಮೈಗೂಡಿಸಿಕೊಂಡರೆ ವ್ಯಕ್ತಿಗತವಾಗಿ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಯುವಜನರು ವಿವಿಧ ದುಶ್ಚಟಗಳಿಗೆ ಬಲಿಯಾಗುವ ಮೂಲಕ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ದುರಾಭ್ಯಾಸಗಳು ಜೀವನಕ್ಕೆ ಕಂಟಕ. ಆದ್ದರಿಂದ ದುಶ್ಚಟಗಳಿಂದ ದೂರ ಇರಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ದೇಶ, ರಾಜ್ಯಕ್ಕೆ ಹೆಸರು ತರುವ ಕೆಲಸ ಮಾಡಬೇಕು ಎಂದರು.
ಉನ್ನತ ಶಿಕ್ಷಣ ಸ್ವಂತ ನಿರ್ಧಾರ ಮತ್ತು ಸ್ವಾತಂತ್ರೃ ಬದುಕಿಗೆ ರಹದಾರಿ. ಜೀವನದಲ್ಲಿ ದೃಢ ನಿರ್ಧಾರಕ್ಕೆ ಇದುವೇ ಮೊದಲ ಹೆಜ್ಜೆ. ಜೀವನದಲ್ಲಿ ಏನು ಆಗಬೇಕು ಎಂಬುದು ಈ ಅವಧಿಯಲ್ಲೇ ನಿರ್ಧಾರವಾಗುತ್ತದೆ. ಆದ್ದರಿಂದ ಉನ್ನತ ಶಿಕ್ಷಣವೇ ಜೀವನದ ದಿಕ್ಸೂಚಿ ಎಂದರು.
ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ, ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ವಿ.ಆರ್.ಶೈಲಜಾ, ಆಡಳಿತಾಧಿಕಾರಿ ಪ್ರೊ.ಎಸ್.ಟಿ.ರಾಮಚಂದ್ರ, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ, ಐಕ್ಯುಎಸಿ ನಿರ್ದೇಶಕ ಪ್ರೊ.ಕೆ.ಎನ್.ಅಮೃತೇಶ್ ಇತರರು ಇದ್ದರು.