ಜಿಲ್ಲೆ

ಶಿಸ್ತು, ಆತ್ಮಬಲ ವೃದ್ಧಿಗೆ ಸ್ಕೌಟ್, ಗೈಡ್ ಚಳವಳಿ ಸಹಕಾರಿ

ಚಿತ್ರದುರ್ಗ: ವಿದ್ಯಾರ್ಥಿಗಳು ದೇಶಾಭಿಮಾನ ಬೆಳೆಸಿಕೊಳ್ಳುವಂತೆ ಕಲಬುರಗಿ ಸಿದ್ಧಬಸವ ಸ್ವಾಮೀಜಿ ಸಲಹೆ ನೀಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಮುರುಘಾಮಠದಲ್ಲಿ ಹಮ್ಮಿಕೊಂಡಿರುವ 3 ದಿನಗಳ ರಾಜ್ಯಮಟ್ಟದ ಐತಿಹಾಸಿಕ ಸ್ಥಳಗಳ ಪರಿಚಯ ಮತ್ತು ವೀಕ್ಷಣಾ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ವೀರವನಿತೆ ಒನಕೆ ಓಬವ್ವ ಪ್ರಾಣ ಲೆಕ್ಕಿಸದೆ ಶತ್ರುಗಳನ್ನು ಸದೆ ಬಡಿದು ಐತಿಹಾಸಿಕ ಚಿತ್ರದುರ್ಗ ಕೋಟೆ ರಕ್ಷಿಸಿದಳು. ಅಂತಹ ಕೆಚ್ಚದೆ, ಛಲ ಬಿಚ್ಚುಗತ್ತಿ ಭರಮಣ್ಣ ನಾಯಕರಲ್ಲಿದ್ದ ಶೌರ್ಯವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ರಾಜಮಹಾರಾಜರು, ಪಾಳೇಗಾರರು ಆಳಿದ ಚಿತ್ರದುರ್ಗಕ್ಕೆ ತನ್ನದೇ ಆದ ಇತಿಹಾಸವಿದೆ. ದುರ್ಗ ಶೌರ್ಯ, ಪರಾಕ್ರಮಕ್ಕೆ ಹೆಸರಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಇಲ್ಲಿನ ಇತಿಹಾಸ ತಿಳಿದುಕೊಳ್ಳಬೇಕು. ಶಿಸ್ತು, ಆತ್ಮಬಲ, ಉತ್ತಮ ಆರೋಗ್ಯ ಪಡೆಯಲು ಸ್ಕೌಟ್ ಮತ್ತು ಗೈಡ್ ಚಳವಳಿ ಸಹಕಾರಿಯಾಗಿದೆ ಎಂದು ತಿಳಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮುಖ್ಯ ಆಯುಕ್ತ ಕೆ. ರವಿಶಂಕರ್‌ರೆಡ್ಡಿ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ದೇಶ ಕಟ್ಟುವ ನಾಯಕತ್ವ ಬೆಳೆಯುತ್ತದೆ. ಭಾರತದ ಭವ್ಯ ಭವಿಷ್ಯ ಯುವ ಜನರ ಮೇಲಿದೆ. ಶಿಕ್ಷಣದ ಜತೆ ಇಂಥ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವುದರಿಂದ ಬದುಕುವ ಕೌಶಲ ಸಿಗುತ್ತದೆ. ಆದರೆ, ಇಂದಿನ ಮಕ್ಕಳಲ್ಲಿ ಮೌಲ್ಯ, ಸಿದ್ಧಾಂತಗಳು ಮಾಯವಾಗುತ್ತಿರುವುದು ನೋವಿನ ಸಂಗತಿ.

ಸ್ಮಾರ್ಟ್‌ಫೋನ್ ಗೀಳಿನಿಂದ ಯುವ ಪೀಳಿಗೆ ಹೊರ ಬರಬೇಕಿದೆ. ಗುರು-ಹಿರಿಯರನ್ನು ಗೌರವಿಸಬೇಕು. ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪದ್ಧತಿ ಒಳ್ಳೆಯದಲ್ಲ. ಜೀವನದಲ್ಲಿ ಗುರಿ ಇರಬೇಕು. ಪಠ್ಯದ ಜತೆ ಕೌಶಲ ಆಧರಿತ ಶಿಕ್ಷಣ ಸ್ವಾವಲಂಬಿ ಬದುಕಿಗೆ ನೆರವಾಗಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್‌ನ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಏಳುಸುತ್ತಿನ ಕಲ್ಲಿನಕೋಟೆಯಿಂದಾಗಿ ಚಿತ್ರದುರ್ಗ ಪ್ರಸಿದ್ಧಿಯಾಗಿದೆ. ಮುರುಘಾಮಠಕ್ಕೆ ರಾಜಪರಂಪರೆ ಇತಿಹಾಸವಿದೆ. ಚಾರಿತ್ರಿಕ, ಧಾರ್ಮಿಕ ಸ್ಥಳಗಳಿಗೆ ಜಿಲ್ಲೆ ಹೆಸರುವಾಸಿಯಾಗಿದೆ ಎಂದು ತಿಳಿಸಿದರು. ಶಿಸ್ತು ಮತ್ತು ಸಮಯ ಪಾಲನೆಗೆ ಹೆಸರುವಾಸಿಯಾಗಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಸೇರುವುದು ಒಂದು ಸುವರ್ಣಾವಕಾಶ. ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಹೊರ ಹೊಮ್ಮಬೇಕಾದರೆ ಇಂತಹ ಸಂಸ್ಥೆಗಳಲ್ಲಿ ಮೊದಲು ಸೇವೆ ಸಲ್ಲಿಸಬೇಕು. ಸಮಯ ಅತ್ಯಂತ ಅಮೂಲ್ಯ. ಯಾರನ್ನೂ ಕಾಯುವುದಿಲ್ಲ. ಹಾಗಾಗಿ ಸಮಯಕ್ಕೆ ಹೆಚ್ಚಿನ ಮ ಹತ್ವ ಕೊಡಬೇಕು ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಜಿ.ಎಸ್. ಉಜ್ಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ಎ. ಲಿಂಗಾರೆಡ್ಡಿ, ಜಿಲ್ಲಾ ಸ್ಥಾನಿಕ ಆಯುಕ್ತರಾದ ಎಂ.ಕೆ. ಅನಂತರೆಡ್ಡಿ, ಪಿ.ವೈ. ದೇವರಾಜ್ ಪ್ರಸಾದ್, ರೋವರ್ಸ್‌ ಶಿಬಿರದ ನಾಯಕ ಟಿ.ಎಸ್. ಶಿವಣ್ಣ, ರೇಂಜರ್ಸ್‌ ಶಿಬಿರದ ನಾ ಯಕಿ ಆರ್.ಎಲ್. ಅಶ್ವಿನಿ, ರೇಂಜರ್ಸ್‌ ಜಿಲ್ಲಾ ನೋಡಲ್‌ಅಧಿಕಾರಿ ಡಾ.ಕೆ. ಲೀಲಾವತಿ, ರೋವರ್ಸ್‌ ಜಿಲ್ಲಾ ನೋಡಲ್ ಅಧಿಕಾರಿ ಎಚ್. ತಿಪ್ಪೇಸ್ವಾಮಿ, ಡಾ.ರಹಮತ್‌ವುಲ್ಲಾ, ಕೆ.ಟಿ. ಮಲ್ಲೇಶಪ್ಪ, ಸಿ. ರವಿ ಇತರರು ಇದ್ದರು.