ಯಳಂದೂರು: ರೋಟರಿ ಇಡೀ ಜಗತ್ತಿನಲ್ಲಿ ಶಿಸ್ತಿನ ಸೇವೆಗೆ ಹೆಸರಾಗಿದ್ದು ಎಲ್ಲರೂ ಸೇವೆಯಲ್ಲಿ ನಿರಂತರವಾಗಿರಬೇಕು ಎಂದು ರೋಟರಿ ಸಂಸ್ಥೆಯ ಪೂರ್ವ ಜಿಲ್ಲಾ ಪ್ರಾಂತಪಾಲ ಡಾ.ಆರ್.ಎಸ್.ನಾಗಾರ್ಜುನ ಹೇಳಿದರು.
ಪಟ್ಟಣದ ಶ್ರೀ ಶಂಕರ ಸಭಾಭವನದಲ್ಲಿ ರೋಟರಿ ಗ್ರೀನ್‌ವೇ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ರೋಟರಿ ಸಂಸ್ಥೆ 200ಕ್ಕೂ ಹೆಚ್ಚು ದೇಶಗಳಲ್ಲಿ 12ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಇಡೀ ವಿಶ್ವದಲ್ಲೇ ಪೋಲಿಯೋ ನಿರ್ಮೂಲನೆಗೆ ನಮ್ಮ ಸಂಸ್ಥೆ ಮೊದಲು ಪಣ ತೊಟ್ಟಿತ್ತು. ಪ್ರತಿ ವರ್ಷ ಇದಕ್ಕಾಗಿ 450 ಮಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತದೆ. ನಮ್ಮ ಸೇವೆಯನ್ನು ನೋಡಿ ಬಿಲ್‌ಗೇಟ್ಸ್ ಸಂಸ್ಥೆ ವತಿಯಿಂದ ಇದಕ್ಕೆ ಖರ್ಚಾಗುವ 2 ಪಟ್ಟು ಹಣವನ್ನು ಸಂಸ್ಥೆಗೆ ನೀಡುತ್ತಿದೆ. ಇದು ಪ್ರಾಮಾಣಿಕ ಸೇವೆಗೆ ಸಂದ ಗೌರವ. ಇದೊಂದು ಮೈಲಿಗಲ್ಲಾಗಿದ್ದು ನಾವು ದೃಢ ನಿಶ್ಚಯ ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಇಂತಹ ಮನಸ್ಥಿತಿ ಇಟ್ಟುಕೊಂಡು ನಾವು ಕೆಲಸ ಮಾಡಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷ ವೈ.ಜಿ.ನಿರಂಜನ ಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆಯು ಈ ಹಿಂದಿನ ಅಧ್ಯಕ್ಷರು, ಪದಾಧಿಕಾರಿಗಳ ನೇತೃತ್ವದಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ನಾವು ಶ್ರಮ ಮೀರಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಹಾಯಕ ಪ್ರಾಂತಪಾಲ ಎಸ್.ಬಸವರಾಜು, ವಲಯ ಪ್ರತಿನಿಧಿ ಕೆಂಪೇಗೌಡ, ಮಾಜಿ ಅಧ್ಯಕ್ಷ ವೈ.ಎನ್.ಪ್ರಕಾಶ್, ಕಾರ್ಯದರ್ಶಿ ಸಿ.ಪುಟ್ಟರಾಜು, ಖಜಾಂಚಿ, ಎಸ್.ರವಿ, ಸದಸ್ಯರಾದ ಎನ್.ಶಿವಕುಮಾರ್, ವೈ.ಎನ್.ಬಂಗಾರು, ಎಂ.ಎಸ್.ರಿತೇಶ್, ವೈ.ಬಿ.ನಟರಾಜು, ವೈ.ಕೆ.ಮೋಳೆ ನಾಗರಾಜು, ಅನಿಲ್‌ಕುಮಾರ್, ಎಂ.ನಟರಾಜು, ವೈ.ಡಿ.ಸೂರ್ಯನಾರಾಯಣ, ಬಿ.ಟಿ.ಶ್ರೀನಿವಾಸ, ಡಾ.ವಿ.ಜಿ.ಸಾಗರ್, ಎನ್.ರುದ್ರಯ್ಯ, ಶಿವಮೂರ್ತಿ ಮುಡಿಗುಂಡ, ಎಂ.ದೇವರಾಜು ಇದ್ದರು.