ಜಿಲ್ಲೆ

ಶಿಸ್ತಿನ ಸಿಪಾಯಿಗಳಾಗಿ ದುಡಿವೆವು

ಕೋಲಾರ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಎಲ್ಲ ವಿಭಾಗಗಳು ಒಟ್ಟಿಗೆ ಸೇರಿ ಶಿಸ್ತಿನ ಸಿಪಾಯಿಗಳಂತೆ ದುಡಿದು ಅಭ್ಯರ್ಥಿ ರಮೇಶ್‌ಬಾಬು ಅವರನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿ ರಮೇಶ್‌ಬಾಬು ಹಿಂದೆ ವಿಧಾನಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವುದರಿಂದ ಕ್ಷೇತ್ರ ವ್ಯಾಪ್ತಿಯ 5 ಜಿಲ್ಲೆಗಳಲ್ಲೂ ಮತದಾರರ ಜತೆ ನಿಕಟ ಸಂಪರ್ಕವಿದೆ. ನಮ್ಮ ಭಾಗದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ದುಡಿದು ಹೆಚ್ಚಿನ ಮತ ಕೊಡಿಸಿ ಜಯಶೀಲರನ್ನಾಗಿ ಮಾಡುತ್ತೇವೆ. ಪಕ್ಷದ ಎಲ್ಲ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ಎಂದರು.

ಅಭ್ಯರ್ಥಿ ರಮೇಶ್‌ಬಾಬು ಮಾತನಾಡಿ, ಕ್ಷೇತ್ರ ವ್ಯಾಪ್ತಿಯ 5 ಜಿಲ್ಲೆಯ 33 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 13, ಜೆಡಿಎಸ್‌ನ 5, ಒಬ್ಬ ಪಕ್ಷೇತರ ಶಾಸಕರಿದ್ದಾರೆ. ಒಟ್ಟು 1.9 ಲಕ್ಷ ಮಂದಿ ಮತದಾರರಿದ್ದಾರೆ. ಎಲ್ಲ ಕಡೆ ಅಭೂತಪೂರ್ವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲೂ 20,000 ಮತದಾರರಿದ್ದು, ಆಶೀರ್ವಾದ ಮಾಡುವ ವಿಶ್ವಾವಿದೆ ಎಂದರು.

ಕ್ಷೇತ್ರದಲ್ಲಿ ನಕಲಿ ಮತದಾರರಿರುವ ಬಗ್ಗೆ ಮಾಹಿತಿಯಿದ್ದರೂ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಮುಗಿದಿರುವುದರಿಂದ ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರ ಮೂಲಕ ನಕಲಿ ಮತದಾರರನ್ನು ತಡೆಯಲಾಗುವುದು ಎಂದರು.

ರಾಜ್ಯ ಸರ್ಕಾರ ವಿಫಲ: ವಿದ್ಯಾಗಮ ಕಾರ್ಯಕ್ರಮದ ಸಂದರ್ಭದಲ್ಲಿ ಅನೇಕ ಶಿಕ್ಷಕರು ಕರೊನಾಗೆ ಬಲಿಯಾಗಿದ್ದಾರೆ. ವಿದ್ಯಾರ್ಥಿಗಳಿಗೂ ಸೋಂಕು ತಗುಲಿದೆ. ವಿದ್ಯಾಗಮ ಕಾರ್ಯಕ್ರಮ ಆರಂಭಿಸಿದ್ದು ಸರ್ಕಾರದ ನಿರ್ಧಾರ ತಪ್ಪು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ , ಮಾಜಿ ಸಚಿವ ಕೆ.ಎ.ನಿಸಾರ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯಶಂಕರ್, ಕಿಸಾನ್ ಖೇತ್ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್ಸಿ ಘಟಕ ಅಧ್ಯಕ್ಷ ಕೆ.ಜಯದೇವ್, ಎಸ್ಟಿ ಅಧ್ಯಕ್ಷ ನಾಗರಾಜ್, ಒಬಿಸಿ ಅಧ್ಯಕ್ಷ ಅಶೋಕ್, ಮುಖಂಡರಾದ ಇಕ್ಬಾಲ್, ಕುಮಾರ್, ಜೆ.ಕೆ. ಜಯರಾಂ, ಬೆಳ್ಳಂಬರಿ ನಾಗರಾಜ್ ಇತರರಿದ್ದರು.

ಹೈಕಮಾಂಡ್ ಸೂಚನೆಗೆ ಬದ್ಧ: ನಾನು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನಿಸುತ್ತದೆ. ಹೈಕಮಾಂಡ್ ಸೂಚನೆ ಪಾಲಿಸುವುದಷ್ಟೇ ನನ್ನ ಕೆಲಸ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯ. ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಚರ್ಚಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯೊಂದಿಗೆ ರಾಜ್ಯದಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬುದು ಅವರ ಆಶಯ. ಕಳೆದ 30 ವರ್ಷಗಳಿಂದ ಎಐಸಿಸಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾನು ರಾಜ್ಯ ರಾಜಕಾರಣಕ್ಕೆ ಬರುವ, ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಕೊತ್ತೂರು ಮಂಜುನಾಥ್ ಕೆಲಸ ಮಾಡಿದ್ದರಿಂದ ಅವರೊಂದಿಗೆ ಬಾಂಧವ್ಯವಿಲ್ಲ. ಪಕ್ಷ ಶಿರಾ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ವಹಿಸಿದೆ. ಗುರುವಾರದಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ