ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಬುಧವಾರ ಕೆನರಾ ಬ್ಯಾಂಕಿನ ಕ್ಷೇತ್ರಿಯ ಕಾರ್ಯಾಲಯ ಬಾಗಲಕೋಟೆ ವತಿಯಿಂದ ಹಮ್ಮಿಕೊಂಡಿದ್ದ ಕೆನರಾ ವಿದ್ಯಾಜ್ಯೋತಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಉದ್ಘಾಟಿಸಿದರು. ಸಿಇಒ ಶಶಿಧರ ಕುರೇರ, ಕೆನರಾ ಬ್ಯಾಂಕಿನ ಹುಬ್ಬಳ್ಳಿ ವಿಭಾಗದ ಮಹಾ ಪ್ರಬಂಧಕ ವಿಜಯಕುಮಾರ, ಕ್ಷೇತ್ರೀಯ ಸಹಾಯಕ ಮಹಾ ಪ್ರಬಂಧಕಿ ಶೈಲಜಾ ಕೆ.ಆರ್. ಇತರರು ಇದ್ದರು. 
ಜಿಲ್ಲೆ

ಶಿಷ್ಯವೇತನ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ

ಬಾಗಲಕೋಟೆ: ವಿದ್ಯಾರ್ಜನೆ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆ ಸರ್ಕಾರ ಕೊಡುವ ಶಿಷ್ಯವೇತನ ಅವರ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಬುಧವಾರ ಕೆನರಾ ಬ್ಯಾಂಕಿನ ಕ್ಷೇತ್ರಿಯ ಕಾರ್ಯಾಲಯ ಬಾಗಲಕೋಟೆ ವತಿಯಿಂದ ಹಮ್ಮಿಕೊಂಡಿದ್ದ ಕೆನರಾ ವಿದ್ಯಾಜ್ಯೋತಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಶಿಷ್ಯವೇತನ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಇಂತಹ ಶಿಷ್ಯವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಂಡು ನಿಮ್ಮ ಮನೆ, ಗ್ರಾಮ ಹಾಗೂ ಪಾಲಕರಿಗೆ, ಗುರುಗಳಿಗೆ ಕೀರ್ತಿ ತರುವಂತ ಕಾರ್ಯ ಮಾಡಬೇಕು. ಶಿಕ್ಷಣದಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವೆಂಬ ಅಂಬೇಡ್ಕರ ಅವರ ತತ್ವಾದರ್ಶಗಳನ್ನು ತಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗೆ ಶಿಷ್ಯವೇತನದ ಹಣ ಮುಖ್ಯವಲ್ಲ. ವಿದ್ಯಾರ್ಥಿಗಳಲ್ಲಿ ಹುದುಗಿದ ಆಸಕ್ತಿ, ಪ್ರತಿಭೆ ಗುರುತಿಸುವ ಕಾರ್ಯದಿಂದಾಗಿ ಅಂತಹ ಮಕ್ಕಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶಿಷ್ಯವೇತನ ಉಪಯುಕ್ತವಾಗಿದೆ. ಇಂತಹ ಶಿಷ್ಯವೇತನ ಪಡೆದ ಪ್ರತಿಯೊಂದು ವಿದ್ಯಾರ್ಥಿಗಳು ಬಂದ ಹಣವನ್ನು ವಿದ್ಯಾರ್ಜನೆಗೆ ಉಪಯೋಗಿಸಿಕೊಂಡು ನಿರ್ಧಿಷ್ಟ ಗುರಿ ಅಪರಮಿತ ಪ್ರಯತ್ನದಿಂದ ವಿದ್ಯಾರ್ಜನೆ ಮಾಡಿದಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಹಿಂದಿನ ೨೦೦೦ ಇಸ್ವಿಯಲ್ಲಿ ಇಂತಹ ಸಂಘ ಸಂಸ್ಥೆಗಳು ಶಿಷ್ಯವೇತನ ನೀಡುತ್ತಿರಲಿಲ್ಲ. ಇದರಿಂದಾಗಿ ಅಂದಿನ ಅದೆಷ್ಟೋ ಪ್ರತಿಭೆಗಳು ಆರ್ಥಿಕ ಹಿನ್ನಡೆಯಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂದು ಅಂತಹ ಪಾಲಕರು ತಮಗೊದಗಿ ಬಂದ ಪರಿಸ್ಥಿತಿ ಮಕ್ಕಳಿಗೆ ಬರಬಾರದೆಂಬ ಉದ್ದೇಶದಿಂದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಆಸಕ್ತಿ ತೋರುತ್ತಿದ್ದಾರೆ. ಇವರ ಆಶ ನೆರವೇರಿಸಲು ಕೆನರಾ ಬ್ಯಾಂಕ್ ಮುಂದಾಗಿದ್ದು, ಜಿಲ್ಲೆಯ ೩೧೨ ವಿದ್ಯಾರ್ಥಿಗಳಲ್ಲಿ ಕನಿಷ್ಟ ೩೦ ವಿದ್ಯಾರ್ಥಿಗಳು ಉನ್ನತ ಶಿಕ್ಷಣವಂತರಾಗಬೇಕು ಎಂದು ಹೇಳಿದರು.

ಕೆನರಾ ಬ್ಯಾಂಕಿನ ಹುಬ್ಬಳ್ಳಿ ವಿಭಾಗದ ಮಹಾ ಪ್ರಬಂಧಕ ವಿಜಯಕುಮಾರ ಮಾತನಾಡಿ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಂದೆ, ತಾಯಿ ಹಾಗೂ ಗುರುವಿನ ಋಣ ತೀರಿಸುವ ಕಾರ್ಯ ಮಾಡಬೇಕು. ಆ ದಿಶೆಯಲ್ಲಿ ಕೆನರಾ ಬ್ಯಾಂಕ್ ಪ್ರತಿ ವರ್ಷ ಬ್ಯಾಂಕಿಗೆ ಬಂದ ಲಾಭದಲ್ಲಿ ಗ್ರಂಥಾಲಯ, ಕುಡಿಯುವ ನೀರು ಸೇರಿದಂತೆ ಅನೇಕ ಜನಪರ ಕಾರ್ಯದಲ್ಲಿ ಶಿಷ್ಯವೇತನ ಮುಖ್ಯವಾಗಿದೆ. ಈ ಕಾರ್ಯ ಈಡೀ ದೇಶದಾದ್ಯಂತ ವಿಸ್ತರಿಸುವ ಕಾರ್ಯ ನಡೆಯುತ್ತಿದೆ. ೯೭೦೦ ಶಾಖೆಗಳನ್ನು ಒಳಗೊಂಡು ೨೩ ಲಕ್ಷ ಕೋಟಿ ರೂ. ವ್ಯವಹಾರ ಮಾಡುತ್ತಿದ್ದ ಕೆನರಾ ಬ್ಯಾಂಕ್‌ನಲ್ಲಿ ತಾವು ಸಣ್ಣದೊಂದು ಖಾತೆ ತೆರದಿದ್ದೇ ಆದರೆ ಉಳಿದೆಲ್ಲ ಉಳಿದೆಲ್ಲ ಬ್ಯಾಂಕಿನ ಸೌಲಭ್ಯಗಳಿಗಿಂತ ವಿಭಿನ್ನವಾದ ಆರೋಗ್ಯಕ್ಕೆ ಸಂಬಂಧಿಸಿದ ಸೇವೆ ಒದಗಿಸಲು ಸಿದ್ದವಾಗಿದೆ. ಪಿಯುಸಿ ನಂತರದ ಶಿಕ್ಷಣಕ್ಕೂ ಶಿಷ್ಯವೇತನ ಕೊಡುವ ಚಿಂತನೆ ಇರುವುದಾಗಿ ಹೇಳಿದರು.

ಪ್ರಾರಂಭದಲ್ಲಿ ಜಿಲ್ಲಾ ಕೆನರಾ ಬ್ಯಾಂಕಿನ ಕ್ಷೇತ್ರೀಯ ಸಹಾಯಕ ಮಹಾ ಪ್ರಬಂಧಕಿ ಶೈಲಜಾ ಕೆ.ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾಂಖೇತಿಕವಾಗಿ ಕೆಲವೊಂದು ವಿದ್ಯಾರ್ಥಿಗಳಿಗೆ ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ರಣ ಬ್ಯಾಂಕಿನ ವ್ಯವಸ್ಥಾಪಕ ರಾಜಕುಮಾರ ಹೂಗಾರ, ಹಿರಿಯ ವ್ಯವಸ್ಥಾಪಕ ಮುಕುಂದ ಜಳಕಿ, ಬ್ಯಾಂಕ್‌ನ ವ್ಯವಸ್ಥಾಪಕ ಚೇತನ ಪಾಟೀಲ, ಚೈತ್ರಾ, ವಿಠಲ ಯತ್ನಟ್ಟಿ, ಕಿರಣಕುಮಾರ ಬಿದರಕುಂದಿ, ಮರಿಯಪ್ಪನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.