ಬಳ್ಳಾರಿ : ಕಿರಿಯ ವೈದ್ಯರ ಶಿಷ್ಯ ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯಾದ್ಯಂತ ಕರ್ನಾಟಕ ಆಸೋಸಿಯೇಷನ್ ಪ್ರೆಸಿಡೆಂಟ್ ಡಾಕ್ಟರ್ಸ್ ಕರೆ ಹಿನ್ನಲೆ ಇಲ್ಲಿನ ಬಿಮ್ಸ್ ಆವರಣದಲ್ಲಿ ರೆಸಿಡೆಂಟ್ ಡಾಕ್ಟರ್ಸ್ ಆಸೋಸಿಯೇಷನ್ ವತಿಯಿಂದ ಸೋಮವಾರ ಪ್ರತಿಭಟಿಸಿತು.
ಜಿಲ್ಲಾಧ್ಯಕ್ಷ ಡಾ. ಎನ್.ಸಿ.ಮಂಜುನಾಥ ಮಾತನಾಡಿ, ರಾಜ್ಯದಲ್ಲಿ ವೈದ್ಯರ ಶಿಷ್ಯ ವೇತನ ಪ್ರತಿ ವರ್ಷ ಹೆಚ್ಚಿಸಬೇಕು. ಆದರೆ, ಕಳೆದ ಐದು ವರ್ಷಗಳಿಂದ ವೇತನ ಹೆಚ್ಚಿಸಿಲ್ಲ. ಅಲ್ಲದೆ, ಪ್ರತಿ ವರ್ಷ ಸರ್ಕಾರ ಮಾತ್ರ ವೈದ್ಯರ ಶುಲ್ಕ ಮಾತ್ರ ಹೆಚ್ಚಿಸುತ್ತಿದೆ. ವಿವಿಧ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಶಿಷ್ಯ ವೇತನ ಕಡಿಮೆಯಿದೆ. ಸದ್ಯ 45 ಸಾವಿರ ರೂ. ಇರುವ ವೇತನವನ್ನು ಒಂದು ಲಕ್ಷ ರೂ. ಅಧಿಕ ಹೆಚ್ಚಿಸಬೇಕು. ಕಾರ್ಯ ನಿರ್ವಹಿಸುವ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದೆ. ಆದ್ದರಿಂದ, ಸರ್ಕಾರ ಹಲ್ಲೆ ಮಾಡಿದವರ ಮೇಲೆ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರದಿಂದ ಸ್ಪಂದನೆ ಬರುವರರೆಗೂ ಮುಷ್ಕರ ಮುಂದುವರೆಯಲಾಗುವುದು ಎಂದು ಎಚ್ಚರಿಸಿದರು.
ತುರ್ತು ಚಿಕಿತ್ಸಾ ಘಟಕದಲ್ಲಿ ಮಾತ್ರ ಕೆಲ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ಉಳಿದಂತೆ ಮೂರ ನೂರಕ್ಕೂ ಹೆಚ್ಚು ಪಿಜಿ ಹಾಗೂ ಹೌಸ್ ಮೆನ್ ಶಿಪ್ ಕಿರಿಯ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ನಿರ್ದೇಶಕ ಡಾ.ಟಿ. ಗಂಗಾಧರಗೌಡ ಪ್ರತಿಭಟನೆ ಮುಗಿಯವರೆಗೂ ಎಲ್ಲ ಕಾಯಂ ವೈದ್ಯರು ಅವರವರ ವಿಭಾಗದಲ್ಲಿ ಕಟ್ಟುನಿಟ್ಟಿನ ಚಿಕಿತ್ಸೆ ನೀಡುವಂತೆ ಆದೇಶ ನೀಡಿದ್ದಾರೆ. ಕಿರಿಯ ವೈದ್ಯರ ಇಲ್ಲದ ಕಾರಣ ಬಿಮ್ಸ್‌ನಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡಬೇಕಾದ ಅನಿವಾರ್ಯತೆ ಎದುರಾಗಿದೆ.