ಜಿಲ್ಲೆ

ಶಿಷ್ಟಾಚಾರ ಪಾಲನೆಯಾಗಲಿ

ಬೀದರ್: ಸರ್ಕಾರಿ ಸಭೆ ಮತ್ತು ಸಮಾರಂಭ ಆಯೋಜನೆ ವೇಳೆ ಶಿಷ್ಟಾಚಾರ ಕಡ್ಡಾಯ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಡಿಸಿ ಕಚೇರಿಯಲ್ಲಿ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಒಳಗೊಂಡಂತೆ ಸರ್ಕಾರದ ಆಯಾ ಇಲಾಖೆಯ ಅಧಿಕೃತ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಇಲಾಖೆಯವರು ಸಚಿವರ ಸಮಾಲೋಚನೆಯೊಂದಿಗೆ ಕಾರ್ಯಕ್ರಮ ಏರ್ಪಡಿಸಬೇಕು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬದಲಾಗಿ ಜನಪ್ರತಿನಿಧಿಗಳು, ಸಾರ್ವಜನಿಕರೇ ಆಹ್ವಾನ ಪತ್ರಿಕೆ ಮುದ್ರಿಸಿ ಸರ್ಕಾರಿ ಸಮಾರಂಭಗಳು ಏರ್ಪಡಿಸಬಾರದು. ಯಾವುದೇ ಸರ್ಕಾರಿ ಸಭೆ ಅಥವಾ ಕಾರ್ಯಕ್ರಮ ಖಾಸಗಿ ನಿವಾಸದಲ್ಲಿ ಏರ್ಪಡಿಸುವಂತಿಲ್ಲ ಎಂದು ಸೂಚಿಸಿದರು.

ಸರ್ಕಾರದ ಯಾವುದೇ ಕಾರ್ಯಕ್ರಮವಾಗಿದ್ದರೂ ನಡೆವ ಸ್ಥಳದ ವ್ಯಾಪ್ತಿಗೊಳಪಡುವ ವಿಧಾನಸಭಾ ಕ್ಷೇತ್ರ ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಬೇಕು. ತಾಲೂಕು ಕೇಂದ್ರ ಸ್ಥಾನವು ಇನ್ನೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೂ ಅಂತಹ ಕಾಂ ಕಾರ್ಯಕ್ರಮ ಯಾವ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಿರುತ್ತದೆಯೋ ಅಲ್ಲಿನ ಶಾಸಕರು ಅಧ್ಯಕ್ಷತೆ ವಹಿಸಬೇಕು ಎನ್ನುವ ಶಿಷ್ಟಾಚಾರ ಅಧಿಕಾರಿಗಳು ತಪ್ಪದೇ ಪಾಲಿಸಲು ನಿರ್ದೇಶನ ನೀಡಿದರು.

ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ಶಿಷ್ಟಾಚಾರದ ಬಗ್ಗೆ ಏನೇ ಗೊಂದಲವಿದ್ದರೂ ಆ ಬಗ್ಗೆ ಅಧಿಕಾರಿಗಳು ಕೇಳಿ ತಿಳಿದುಕೊಳ್ಳಬೇಕು. ಶಿಷ್ಟಾಚಾರ ಲೋಪವಾದಲ್ಲಿ ಸಂಬಂಧಿತ ಅಧಿಕಾರಿಗಳನ್ನೇ ಹೊಣೆಯಾಗಿಸಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಅಪರ ಡಿಸಿ ರುದ್ರೇಶ ಘಾಳಿ,ಬೀದರ್ ಎಸಿ ಗರೀಮಾ ಪನ್ವಾರ್, ಬಸವಕಲ್ಯಾಣ ಎಸಿ ಭುವನೇಶ ಪಟೇಲ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.