ಸಾಗರ: ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನಾವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸೇತುವೆ ಉದ್ಘಾಟನೆ ಕಾರ್ಯಕ್ರಮದ ಸಂಬಂಧ ಸೋಮವಾರ ಸಾಗರಕ್ಕೆ ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದ ಯಾವುದೇ ಕಾರ್ಯಕ್ರಮವಿರಲಿ ನಾವು ವ್ಯವಸ್ಥಿತವಾಗಿ ಶಿಷ್ಟಾಚಾರ ಪಾಲಿಸುತ್ತೇವೆ. ಕೇಂದ್ರ ಸರ್ಕಾರದ ಅನುದಾನವಿರಲಿ, ರಾಜ್ಯ ಸರ್ಕಾರದ ಅನುದಾನವಿರಲಿ, ಅದು ಅಭಿವೃದ್ಧಿಗೆ ಪೂರಕವಾದ ಸಂಗತಿಯಾಗಿರುತ್ತದೆ. ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಆದರೆ ಅದು ನಿರ್ಮಾಣವಾಗಿರುವುದು ರಾಜ್ಯ ಸರ್ಕಾರ ನೀಡಿರುವ ಭೂಮಿಯಲ್ಲಿ ಎಂಬುದನ್ನು ಮನಗಾಣಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ. ಯೋಜನೆ, ಕಾಮಗಾರಿ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡುವುದು ಒಳ್ಳೆಯದಲ್ಲ ಎಂದು ತಿಳಿಸಿದರು.
ವಿಶ್ವವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿಗೆ 183 ಕೋಟಿ ರೂ. ಹಣ ವಿನಿಯೋಗಿಸಲಾಗುತ್ತಿದೆ. ನಮ್ಮ ಇಲಾಖೆ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಮಲೆನಾಡಿನಲ್ಲಿ ಕಾಲು ಸಂಕಗಳ ಅವಶ್ಯಕತೆ ಇದ್ದು, 50 ಕೋಟಿ ವೆಚ್ಚದಲ್ಲಿ ಕಾಲು ಸಂಕಗಳ ಸಣ್ಣ ನೀರಾವರಿ ಇಲಾಖೆ ಮೂಲಕ ನಿರ್ಮಾಣವಾಗುತ್ತಿದೆ. ನಾನು ಕೂಡ ಇದಕ್ಕೆ ಅನುದಾನ ನೀಡುತ್ತೇನೆ. ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸುವ ಕೆಲಸ ಆಗಬೇಕು. ಈ ಹಿಂದೆ ಅಂತಹ ರಸ್ತೆಗಳನ್ನು ಕಳೆದ ಸರ್ಕಾರ ಸೇರಿಸಿತ್ತು. ಆದರೆ ಅನುದಾನ ಬಿಡುಗಡೆ ಮಾಡಲಿಲ್ಲ. ಆ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದೇವೆ. ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು ಸಾಗರ ತಾಲೂಕಿನಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ನಮ್ಮ ಇಲಾಖೆಯ ಅನುದಾನವನ್ನು ಪಡೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಎನ್ ಸುರೇಶ್ ಬಾಬು, ಮುಖಂಡರಾದ ಕಲಸೆ ಚಂದ್ರಪ್ಪ, ಮಧು ಮಾಲತಿ, ಗಣಪತಿ ಮಂಡಗಳಲೆ, ರವಿ ಕುಮಾರ್, ಅನಿತಾ ಕುಮಾರಿ, ಡಿ. ದಿನೇಶ್, ಚೇತನ್ ರಾಜ್ ಕಣ್ಣೂರ್, ಸೋಮಶೇಖರ್ ಲಾವಿಗೆರೆ, ಅನ್ವರ್, ತಾರಾ, ಆನಂದ ಭೀಮನೇರಿ, ಗಿರೀಶ್ ಕೋವಿ, ಮಹಾಭಲ ಕೌತಿ, ಕೆ.ಹೊಳೆಯಪ್ಪ, ಜಾಕೀರ್ ಇತರರಿದ್ದರು.
ವಿವಿಧ ಅಭಿವೃದ್ಧಿ ಪ್ರಸ್ತಾವನೆಗೆ ಒಪ್ಪಿಗೆ
ಸಾಗರ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ, ಉದ್ಯಾನವನದಲ್ಲಿ ಮಕ್ಕಳ ಆಟದ ವಸ್ತು, ಜಿಮ್ ಹಾಗೂ ರಸ್ತೆ ಅಭಿವೃದ್ಧಿಗೆ 1.50ಕೋಟಿ ಅಂದಾಜು ಪಟ್ಟಿ ನೀಡಲಾಗಿದೆ. ಸಹಕಾರ ನೀಡಲಾಗುವುದು. ಲೋಕೋಪಯೋಗಿ ಇಲಾಖೆ ಮೂಲಕ ಕರ್ನಾಟಕ ರಸ್ತೆ ಅಭಿವೃದ್ಧಿ ನಿಯಮಿತದಿಂದ ಹಸಿರುಮಕ್ಕಿ ಸೇತುವೆಗೆ 1.25ಕೋಟಿ ಅನುದಾನ ನೀಡಲಾಗುವುದು.
ಶರಾವತಿ ಹಿನ್ನೀರಿನ ಜನರ ಸಂಕಷ್ಟ ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ಸೇತುವೆ ನೀಡಿದ್ದಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಇಂದು ಸೇತುವೆ ಲೋಕಾರ್ಪಣೆಗೊಂಡಿರುವುದು ಹಿನ್ನೀರಿನ ಜನರ ಸಂಕಷ್ಟ ಕೊನೆಯದಂತಾಗಿದೆ. ಈ ಹಿಂದೆ ನಾನು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಶಾಸಕನಾಗಿ 100 ಕೋಟಿ ಅನುದಾನ ಕೋರಿದ್ದೆ. ಅದನ್ನು ತಕ್ಷಣ ನೀಡುವಂತೆ ಸರ್ಕಾರಕ್ಕೆ ಅಂದು ಬರೆದಿದ್ದರು. ನಾನು ಕೂಡ ಸೇತುವೆ ಹೋರಾಟದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದೇನೆ. ನಿಜವಾಗಿ ಹೋರಾಟ ಮಾಡಿದವರನ್ನು ಗೌರವಿಸಬೇಕು.
ಗೋಪಾಲಕೃಷ್ಣ ಬೇಳೂರು, ಶಾಸಕ,