ಬೀದರ್‌ನಲ್ಲಿ ನಡೆದ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಗಳ ಸಭೆಯಲ್ಲಿ ವಿಧಾನ ಪರಿಷತ್ ಹಕ್ಕುಬಾಧ್ಯತೆ ಸಮಿತಿ ಅಧ್ಯಕ್ಷ ಎಂ.ನಾಗರಾಜು, ಸದಸ್ಯರಾದ ಎಂ.ಜಿ.ಮುಳೆ, ಭೀಮರಾವ ಪಾಟೀಲ್, ಪಿ.ಎಚ್.ಪೂಜಾರ, ಜಗದೇವ ಗುತ್ತೇದಾರ್, ಡಾ.ತಳವಾರ ಸಾಬಣ್ಣ, ಡಿಸಿ ಶಿಲ್ಪಾ ಶರ್ಮಾ ಇದ್ದರು. 
ಜಿಲ್ಲೆ

ಶಿಷ್ಟಾಚಾರ ಉಲ್ಲಂಸಿದಲ್ಲಿ ಕ್ರಮಕ್ಕೆ ಶಿಫಾರಸು

ಬೀದರ್: ಜಿಲ್ಲೆಯ ಎಲ್ಲ ಇಲಾಖೆ ಅಧಿಕಾರಿಗಳು ಸರ್ಕಾರಿ ಸಮಾರಂಭಗಳ ಆಹ್ವಾನ ಪತ್ರಿಕೆ, ಆಮಂತ್ರಣಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸಬೇಕು. ಶಿಷ್ಟಾಚಾರ ಉಲ್ಲಂಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಮಿತಿ ಶಿಫಾರಸು ಮಾಡಲಿದೆ ಎಂದು ವಿಧಾನ ಪರಿಷತ್ ಹಕ್ಕುಬಾಧ್ಯತೆ ಸಮಿತಿ ಅಧ್ಯಕ್ಷ ಎಂ.ನಾಗರಾಜು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಎಲ್ಲ ಸದಸ್ಯರಿಗೆ ಸಮಾನ ಗೌರವ, ಆದ್ಯತೆ ನೀಡಬೇಕು. ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸುವುದು ಶಿಷ್ಟಾಚಾರದ ಉಲ್ಲಂಘನೆ ಆಗಲಿದೆ ಎಂದರು.

ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳ ಆಹ್ವಾನ, ಆಮಂತ್ರಣ ಪತ್ರಿಕೆಗಳಲ್ಲಿ ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸಿ ಶಿಷ್ಟಾಚಾರ ಉಲ್ಲಂಸಲಾಗಿದೆ. ಸಂಬಂಧಿತ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಯಿಸಿ ವಿಚಾರಣೆ ನಡೆಸುವುದನ್ನು ತಪ್ಪಿಸಲು ನಾವೇ ಖುದ್ದಾಗಿ ಇಲ್ಲಿಗೆ ಬಂದು ಸಭೆ ನಡೆಸುತ್ತಿದ್ದೇವೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ವಿಧಾನ ಪರಿಷತ್ ಸದಸ್ಯರಿಗೂ ಸಮಾನ ಗೌರವ ನೀಡಬೇಕೆಂದು ನಿರ್ದೇಶನ ನೀಡಿದರು.

ಶಿಷ್ಟಾಚಾರ ಪಾಲನೆ ಕುರಿತು ಆರು ತಿಂಗಳಿಗೊಮ್ಮೆ ಎಲ್ಲ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಅಥವಾ ಕಾರ್ಯಾಗಾರ ಏರ್ಪಡಿಸಿ ಅರಿವು ಮೂಡಿಸಬೇಕು. ಡಿಸಿ ಕಚೇರಿಯಲ್ಲಿ ಶಿಷ್ಟಾಚಾರ ನಿರ್ವಹಣಾ ತಹಸೀಲ್ದಾರ್ ಹುದ್ದೆ ಖಾಲಿ ಇರುವುದರಿಂದ ಪ್ರಥಮ ದರ್ಜೆ ಸಹಾಯಕರು ನಿರ್ವಹಿಸುತ್ತಿದ್ದು, ಜಾಗರೂಕತೆಯಿಂದ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿದರು. ಸಮಿತಿ ಸದಸ್ಯರಾದ ಎಂ.ಜಿ. ಮುಳೆ, ಭೀಮರಾವ ಪಾಟೀಲ್, ಜಗದೇವ ಗುತ್ತೇದಾರ್, ಡಾ.ತಳವಾರ ಸಾಬಣ್ಣ, ಕೇಶವ ಪ್ರಸಾದ್, ರಾಮಾಜಿರಾವ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಇತರರಿದ್ದರು.

ಮೂರು ವರ್ಷದಿಂದ ಕಚೇರಿ ನೀಡಿಲ್ಲ: ಎಂಎಲ್‌ಸಿ ಭೀಮರಾವ ಪಾಟೀಲ್ ಅವರು ಕಚೇರಿ ಸ್ಥಾಪಿಸಲು ಮೂರು ವರ್ಷದಿಂದ ಒಂದು ಕೊಠಡಿ ನೀಡಲು ಆಗಿಲ್ಲ. ಹಿಂದಿನ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಈ ಕುರಿತು ಕ್ಷಮಾಪಣೆ ಕೇಳಿದ್ದರು. ಆದರೆ ಈವರೆಗೆ ಅವರಿಗೆ ಔರಾದ್‌ನಲ್ಲಿ ಕೊಠಡಿ ಒದಗಿಸಿಲ್ಲ ಎಂದು ವಿಧಾನ ಪರಿಷತ್ ಹಕ್ಕುಬಾಧ್ಯತೆ ಸಮಿತಿ ಅಧ್ಯಕ್ಷ ಎಂ.ನಾಗರಾಜು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಡಿಸಿ ಶಿಲ್ಪಾ ಶರ್ಮಾ, ಸದ್ಯ ಕೊಠಡಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಔರಾದ್ ಪುರಸಭೆ ಅನುದಾನದಲ್ಲಿ ಕೊಠಡಿ ಸಿದ್ಧಗೊಳ್ಳುತ್ತಿದ್ದು, ಶೀಘ್ರದಲ್ಲೇ ನೀಡುವುದಾಗಿ ತಿಳಿಸಿದರು. ಎಂಎಲ್ಸಿ ಎಂ.ಜಿ. ಮೂಳೆ ಅವರಿಗೂ ಕೊಠಡಿ ಅಗತ್ಯವಿದ್ದು, ಪರಿಶೀಲಿಸಿ ಎಂದು ನಾಗರಾಜು ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರ ಸಮಸ್ಯೆ, ಅಹವಾಲು ಆಲಿಸಲು ಜನಪ್ರತಿನಿಧಿಗಳಿಗೆ ಕಚೇರಿ ಅಗತ್ಯವಿರುತ್ತದೆ. ವಿಧಾನ ಪರಿಷತ್ ಸದಸ್ಯರ ಬಗ್ಗೆ ಅಧಿಕಾರಿಗಳು ಅಸಡ್ಡೆ ತೋರಿಸುವುದು ಸರಿಯಲ್ಲ. ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು.

| ಪಿ.ಎಚ್. ಪೂಜಾರ ವಿಧಾನ ಪರಿಷತ್ ಸದಸ್ಯ