ಯಳಂದೂರು: ಬಿಎಸ್‌ಎನ್‌ಎಲ್ ಇಲಾಖೆಯ ಹಲವು ತಿಂಗಳ ಇಂಟರ್‌ನೆಟ್ ಬಿಲ್ ಪಾವತಿಸದ ಕಾರಣ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ನೆಟ್ ಸ್ಥಗಿತ ಮಾಡಿದ್ದು, ಇದರಿಂದ ಸಾರ್ವಜನಿಕರಿಗೆ ಕೆಲಸ ಕಾರ್ಯಗಳಿಗೆ ತೊಂದರೆೆಯಾಗಿದೆ ಎಂದು ಕೆಲವು ನಾಗರಿಕರು ಆರೋಪಿಸಿದ್ದಾರೆ.
ಪಟ್ಟಣದ ತಾಲೂಕು ಪಂಚಾಯಿತಿ ರಾಜೀವ್ ಗಾಂಧಿ ಸೇವಾ ಸಭಾಂಗಣದಲ್ಲಿ ನಡೆಯುತ್ತಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಇಂಟರ್‌ನೆಟ್‌ಗೆ ಕಳೆದ 3 ತಿಂಗಳ ಬಿಲ್ ಪಾವತಿಯಾಗದ ಕಾರಣ, ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ತಾಲೂಕು ಮಟ್ಟದ ದಿನನಿತ್ಯದ ಕೆಲಸ ಕಾರ್ಯಗಳು, ಆದೇಶಗಳು, ಗೃಹಲಕ್ಷ್ಮಿ, ಸುಕನ್ಯ ಸಮೃದ್ಧಿ ಯೋಜನೆ, ಪೌಷ್ಟಿಕ ಊಟ, ಹಾಜರಾತಿ, ವೇತನ ಸೇರಿದಂತೆ ಇತರ ರಾಜ್ಯಮಟ್ಟ ಹಾಗೂ ಜಿಲ್ಲಾ ಮಟ್ಟದ ಕೆಲಸಗಳು ಸ್ಥಗಿತಗೊಂಡಿವೆ. ಈ ಬಗ್ಗೆ ತಾಲೂಕಿನ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ, ತಿದ್ದುಪಡಿ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ.
ಹಲವು ದಿನಗಳು ಕಳೆದರೂ ಸಂಬಂಧಪಟ್ಟ ತಾಲೂಕು ಸಿಡಿಪಿಒ ಸಕಲೇಶ್ವರ್ ಸಮರ್ಪಕವಾಗಿ ಕಚೇರಿಗೆ ಆಗಮಿಸಿಲ್ಲ, ಇದರಿಂದ ಇಲಾಖೆಗೆ ಸೇರಿದ ಕೆಲಸ ಕಾರ್ಯಗಳು ಇಲ್ಲಿನ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ನೆಟ್ ಬಿಲ್ ಪಾವತಿ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ರತ್ನಮ್ಮ, ಮಹದೇವಮ್ಮ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.