ಮೈಸೂರು: ಶಿವಾರ್ಚಕ ಸಮುದಾಯಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ಶಿವಾರ್ಚಕರ ಸಂಘದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.
ಚಾಮರಾಜನಗರ, ಮಂಡ್ಯ, ಹಾಸನ, ರಾಮನಗರ, ಕೊಡಗು ಮತ್ತು ಬೆಂಗಳೂರು ಭಾಗಗಳಲ್ಲಿ ವಾಸಿಸುತ್ತಿರುವ ಶಿವಾರ್ಚಕ ಸಮಾಜವು ಅತ್ಯಂತ ಪ್ರಾಚೀನವಾಗಿದ್ದು, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ. ಈ ಸಮಾಜವು ಕಾಲಕಾಲಕ್ಕೆ ರಾಷ್ಟ್ರದ ಮತ್ತು ಎಲ್ಲ ಸಮಾಜಗಳಿಗೆ ತನ್ನದೆಯಾದ ಕೊಡುಗೆ ನೀಡಿದೆ. ಒಂದಾನೊಂದು ಕಾಲದಲ್ಲಿ ಐತಿಹಾಸಿಕ ಘಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದ ಮತ್ತು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಂತಹ ಸಮಾಜ ಅನೇಕ ವಿಪ್ಲವಗಳಿಗೆ ಒಳಗಾಗಿ ಇಂದು ಅಲ್ಪಸಂಖ್ಯಾತರ ಸ್ಥಿತಿಗೆ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಸ್ತುತ ನಮ್ಮ ಸಮಾಜವನ್ನು ಮತ್ತೊಂದು ಸಮಾಜದ ಜತೆಗೆ ಗುರುತಿಸಿ ಕರೆಯಲಾಗುತ್ತಿದ್ದು, ಅದು ನಮಗೆ ಅತೀವ ಶೋಚನೀಯ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ವಿಷಯವಾಗಿದೆ. ಈ ಸಂಬಂಧ ಅನೇಕ ದಶಕಗಳಿಂದ ಸಂಘಟನೆ ಮಾಡುತ್ತಾ ಹೋರಾಟ ಮಾಡುತ್ತಿದ್ದರೂ ನಮಗೆ ಪ್ರತ್ಯೇಕವಾದ ಒಂದು ಕಲಂ ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇರೆ ಬೇರೆ ಸಮಾಜಗಳನ್ನೇ ಗುರುತಿಸಿ ಬೇರೆ ಬೇರೆ ರೀತಿಯಾದಂತಹ ಸರ್ಕಾರಿ ಸವಲತ್ತುಗಳನ್ನು ನೀಡಲಾಗುತ್ತಿದೆ. ಅದರಲ್ಲಿ ಅಳಿದು ಉಳಿದ ಸವಲತ್ತುಗಳನ್ನು ನಾವು ಪಡೆಯುವಂತಹ ದುಸ್ಥಿತಿ ಬಂದಿದೆ. ಆದ್ದರಿಂದ ಶಿವಾರ್ಚಕ ಜನಾಂಗವನ್ನು ಸರ್ಕಾರದಿಂದ ಜನಗಣತಿ ಮಾಡಿಸಿ ಪ್ರತ್ಯೇಕ ಸಮುದಾಯವಾಗಿ ಗುರುತಿಸಬೇಕು. ಈ ಮೂಲಕ ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಕರಿಸಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಕೆ.ಎಂ. ನಂಜುಂಡಪ್ಪ, ಪ್ರಧಾನ ಕಾರ್ಯದರ್ಶಿ ಎಸ್. ಪ್ರದೀಪ್, ಖಜಾಂಚಿ ಡಾ.ಬೋಳಪ್ಪ ಗುರೂಜಿ, ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಅಧ್ಯಕ್ಷ ಗಿರೀಶ್ ಶಿವಾರ್ಚಕ, ಸಂಘದ ನಿರ್ದೇಶಕರಾದ ಬಸವಣ್ಣ ಸಿಂಧುವಳ್ಳಿ, ಗೆರಸನಹಳ್ಳಿ ಸತೀಶ್, ವೀರಣ್ಣ ಕುಂದೂರು, ಪಟೇಲ್ ಸೋಮಶೇಖರ್, ಮಹದೇವ್, ಮಂಜು, ರಘು ಇತರರಿದ್ದರು.