ಜಿಲ್ಲೆ

ಶಿವಾಜಿ ಸಾಧನೆ ಯುವಕರಿಗೆ ಸ್ಫೂರ್ತಿ

ಚಾಮರಾಜನಗರ: ವಿಶ್ವದ ಇತಿಹಾಸದಲ್ಲಿಯೇ ಶಿವಾಜಿ ದಿವ್ಯ ತೇಜಸ್ಸು ,ಯಶಸ್ಸು ಹಾಗೂ ಯುವಶಕ್ತಿಯ ಆರಾಧ್ಯ ದೈವ ಆಗಿದ್ದಾರೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಋಗ್ವೇದಿ ತಿಳಿಸಿದರು.

ತಾಲೂಕಿನ ಅಮಚವಾಡಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿವಾಜಿಯ ಸಾಧನೆಗೆ ದೇಶಭಕ್ತಿ, ಮಾತೃಭಕ್ತಿ, ಗುರು ಭಕ್ತಿಯ ಕಾರಣ. ಇಂದಿನ ಯುವಕರು ಶಿವಾಜಿಯ ಆದರ್ಶ ಗುಣಗಳಾದ ಮಾತೃಭಕ್ತಿ, ಗುರು ಭಕ್ತಿ ಹಾಗೂ ದೇಶಭಕ್ತಿಯನ್ನು ಉಸಿರಾಗಿಸಿಕೊಂಡು ಮುನ್ನಡೆಯಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಗುರು ಹಿರಿಯರು, ತಂದೆ-ತಾಯಿಯರ ಆಶೀರ್ವಾದವಿದ್ದಾಗ ರಾಷ್ಟ್ರವನ್ನೇ ಮುನ್ನಡೆಸಬಹುದು ಎಂದರು.

ಯುವಕರು ತಮ್ಮ ಜೀವನದಲ್ಲಿ ಇಂತಹ ಸದ್ಗುಣಗಳ ಮೌಲ್ಯವನ್ನು ಕಟ್ಟಿಕೊಳ್ಳಬೇಕು. ದೇಶಕ್ಕೆ ಸಮರ್ಪಣೆಯ ಭಾವವನ್ನು ಭಕ್ತಿಯನ್ನು ಬೆಳೆಸಿಕೊಳ್ಳಲು ಶಿವಾಜಿಯಂತಹ ಮಹಾನ್ ವೀರರ ಇತಿಹಾಸವನ್ನು ಅಧ್ಯಯನ ಮಾಡಿ ಹೋರಾಟದ ಸಾಹಸದ ಕಥೆಗಳನ್ನು ತಿಳಿಯಿರಿ ಎಂದು ಸಲಹೆ ನೀಡಿದರು.

ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ದೊಡ್ಡಮೋಳೆ ಸುರೇಶ್ ಮಾತನಾಡಿ, ಜಿಲ್ಲಾ ಯುವ ಸಂಘಟನೆಗಳ ಮೂಲಕ ಶಿವಾಜಿ ಆದರ್ಶಗಳನ್ನು ಮತ್ತು ಅವರ ಇತಿಹಾಸದ ಹೋರಾಟಗಳನ್ನು ತಿಳಿಸುವ ಕಾರ್ಯವನ್ನು ಮಾಡುತ್ತಿದೆ. ಯುವಕರು ಪ್ರಕೃತಿಯ ಸಂರಕ್ಷಣೆ ಸಮಾಜದ ನವ ನಿರ್ಮಾಣಕ್ಕೆ ತೊಡಗಿಸಿಕೊಳ್ಳಬೇಕು .ಶಿಕ್ಷಣವನ್ನು ಪ್ರೀತಿಸಿ ,ಅಧ್ಯಯನಶೀಲರಾಗಿ, ಶ್ರೇಷ್ಠ ಭಾರತವನ್ನಾಗಿ ರೂಪಿಸೋಣ ಎಂದರು. ಯುವ ಸಂಘಟನೆಗಳ ಪದಾಧಿಕಾರಿಗಳಾದ ಗುರುರಾಜ್, ಕೀರ್ತಿ ವಿಕಾಸ್ ,ಚಂದನ್, ಮಂಜು, ಸೂರ್ಯ, ಮನೋಜ್ ಇದ್ದರು.