ಬಾಗಲಕೋಟೆ: ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ನೇತೃತ್ವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಸಮಿತಿಯಿಂದ ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಿಲ್ಲಾಡಳಿತ ಭವನಕ್ಕೆ ಪ್ರತಿಭಟನಾ ರ‍್ಯಾಲಿ ಮೂಲಕ ಆಗಮಿಸಿದ ಪ್ರತಿಭಟನಾನಿರತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ ಅವರಿಗೆ ಮನವಿ ಸಲ್ಲಿಸಿದರು.
ಶಿವಾಜಿ ಮೂರ್ತಿ ಪ್ರತಿಷ್ಠಾನೆಗೆ ಈಗಾಗಲೇ ಸಂಬಂಧ ಪಟ್ಟ ಎಲ್ಲ ಇಲಾಖೆಗಳಿಂದಲೂ ಅನುಮತಿ ಪಡೆಯಲಾಗಿದೆ. ಜತೆಗೆ ನಗರಸಭೆಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಿರೋಧವಾದ ಅಭಿಪ್ರಾಯ ವ್ಯಕ್ತವಾಗಿದೆ. ಆದರೂ ಜಿಲ್ಲಾಡಳಿತ ಮಾತ್ರ ಮೂರ್ತಿ ಸ್ಥಾಪನೆಗೆ ಅವಕಾಶ ನೀಡುತ್ತಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ನಗರದಲ್ಲಿ ಶಿವಾಜಿ ಹಾಗೂ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗಾಗಿ ಮೂರ್ತಿಗಳು ನಗರಕ್ಕೆ ಬಂದು ವರ್ಷಗಳೇ ಕಳೆಯುತ್ತ ಬಂದರೂ ಜಿಲ್ಲಾಡಳಿತ ಮಾತ್ರ ಮೂರ್ತಿ ಪ್ರತಿಷ್ಠಾನೆಗೆ ಅನುಮತಿ ನೀಡುತ್ತಿಲ್ಲ. ಜಿಲ್ಲೆಯ ಅನೇಕ ನಗರ ಹಾಗೂ ಪಟ್ಟಣಗಳಲ್ಲಿ ಯಾವುದೇ ಅನುಮತಿ ಇಲ್ಲದೇ ಅನೇಕ ಮಹನೀಯರ ಪುತ್ಥಳಿ ಲೋಕಾರ್ಪಣೆಗೊಂಡಿವೆ. ಆದರೆ, ನಮಗೆ ಮಾತ್ರ ಅನುಮತಿ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಶಿವಾಜಿ ಮೂರ್ತಿ ಪ್ರತಿಷ್ಠಾನೆಗಾಗಿ ಈ ಹಿಂದೆ ಅನೇಕ ಬಾರಿ ಹೋರಾಟ ಮಾಡಿದರೂ ಜಿಲ್ಲಾಡಳಿತ ಮಾತ್ರ ಅನುಮತಿ ನೀಡುತ್ತಿಲ್ಲ. ಈ ಬಗ್ಗೆ ಈಗಾಗಲೇ ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಗಮನಕ್ಕೆ ತರಲಾಗಿದೆ. ಜತೆಗೆ ಆಗಸ್ಟ್ ೧೫ ರಂದು ಅವರಿಗೆ ಭೇಟಿಯಾಗಿ ೨೫ ರಂದು ಶಿವಾಜಿ ಮೂರ್ತಿ ಸ್ಥಳಾಂತರ ಕಾರ್ಯಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿತ್ತು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದರೂ, ಆದರೆ ಈ ಕೆಲಸಕ್ಕೂ ನಮಗೆ ಅವಕಾಶ ನೀಡಲಿಲ್ಲ ಎಂದು ಕಿಡಿಕಾರಿದರು.
ಸಮಿತಿ ಅಧ್ಯಕ್ಷ ಮಾರುತಿರಾವ ಶಿಂಧೆ, ಮುಖಂಡರಾದ ಅಶೋಕ ಲಿಂಬಾವಳಿ, ಗುಂಡುರಾವ ಶಿಂಧೆ, ರಾಜು ವಾಘ್, ರಾಜು ನಾಯ್ಕರ್, ನಗರಸಭೆ ಸದಸ್ಯರಾದ ಜ್ಯೋತಿ ಭಜಂತ್ರಿ, ಶಶಿಕಲಾ ಸುರೇಶ ಮಜ್ಜಗಿ, ಶೋಭಾ ವೆಂಕಟೇಶ ರಾವ, ಗಿರೀಶ ಭಾಂಡಗೆ ಸೇರಿದಂತೆ ಇತರರು ಇದ್ದರು.