ಜಿಲ್ಲೆ

ಶಿವಾಜಿ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್ !

ಬೆಳಗಾವಿ : ತಾಲೂಕಿನ ರಾಜಹಂಸಗಡ ಕೋಟೆ ಅಭಿವೃದ್ಧಿ ಹಾಗೂ ಶಿವಾಜಿ ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ಕ್ರೆಡಿಟ್ ವಾರ್ ಶುರುವಾಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜಹಂಸಗಡ ಕೋಟೆ ಅಭಿವೃದ್ಧಿ ನನ್ನ ಕನಸಿತ್ತು ಎಂದು ಹೇಳುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಬಿಜೆಪಿ ಸರ್ಕಾರದಲ್ಲಿ ಕೋಟೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿರುವ ದಾಖಲೆಗಳನ್ನಿಟ್ಟುಕೊಂಡು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮುಗಿಬಿದ್ದಿದ್ದಾರೆ. ಈಗ ಬಿಜೆಪಿ-ಕಾಂಗ್ರೆಸ್ ಮಧ್ಯೆ ರಾಜಕೀಯ ಪ್ರತಿಷ್ಠೆಯ ಸಮರ ಇದು ಆರಂಭ ಕಾಣುತ್ತಿದೆ.  ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಸರ್ಕಾರಿ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮ ಮಾಡಲು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಯತ್ನಿಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಸರ್ಕಾರಿ ಯೋಜನೆಯನ್ನು ತನ್ನದೆಂದು ಬಿಂಬಿಸಿಕೊಂಡು, ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಮಾಡಲು ಯತ್ನಿಸಿದ್ದಾರೆ ಎಂದು ಶಾಸಕಿ ಲಕ್ಷ್ಮೀ ವಿರುದ್ಧ ರಮೇಶ ಜಾರಕಿಹೊಳಿ, ಸಂಜಯ ಪಾಟೀಲ ಹಾಗೂ ಇತರ ಬಿಜೆಪಿ ನಾಯಕರು ಆರೋಪಿಸಿದ್ದಾರೆ.
 ರಾಜಹಂಸಗಡ ಕೋಟೆಯಲ್ಲಿನ ಶಿವಾಜಿ ಮೂರ್ತಿಯನ್ನು ಮಾರ್ಚ್ 5ರಂದು ಅನಾವರಣಗೊಳಿಸಲು ಶಾಸಕಿ ಲಕ್ಷ್ಮೀ ಸಿದ್ಧತೆ ನಡೆಸಿದ್ದಾರೆ. ಪ್ರತಿಮೆ ಪ್ರತಿಷ್ಠಾಪನೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರು ಬರುತ್ತಾರೆಂದು ಶಾಸಕಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದಕ್ಕೆ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರೋಧ ವ್ಯಕ್ತಪಡಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ ಅವರನ್ನು ಕರೆಯಿಸಿ ಪ್ರತಿಮೆ ಲೋಕಾರ್ಪಣೆ ಮಾಡಿಸಲು ಯೋಜನೆ ರೂಪಿಸಿದ್ದಾರೆ.
 ಬಿಜೆಪಿ ನಾಯಕರು ಆಕ್ರೋಶ:
 ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ, 2010 ರಿಂದಲೇ ರಾಜಹಂಸಘಡ ಅಭಿವೃದ್ಧಿ ಕಾರ್ಯ ನಡೆದಿವೆ. ನಾನು ನೀರಾವರಿ ಸಚಿವನಾಗಿದ್ದಾಗ ಸಿ.ಟಿ ರವಿ ಅವರು 3.5 ಕೋಟಿ ರೂ. ಬಿಡುಗಡೆಯಾಗಿದೆ. ಡಿಕೆಶಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ 50 ಲಕ್ಷ ಅನುದಾನ ನೀಡಿದ್ದಾರೆಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ದಾಖಲೆ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು. ರಾಜಹಂಸಘಡ ಅಭಿವೃದ್ಧಿಯನ್ನು ಕಾಂಗ್ರೆಸ್‌ಮಯ ಮಾಡಲು ಹೊರಟಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ಶಾಸಕರಿಗೆ ಸಿಗಬೇಕಾದ ಗೌರವ ಸಿಗಲೇಬೇಕು, ಅದಕ್ಕೆ ನಮ್ಮ ವಿರೋಧವಿಲ್ಲ. ಇದು ಸರ್ಕಾರಿ ಕಾರ್ಯಕ್ರಮ. ಸಿಎಂ ನೇತೃತ್ವದಲ್ಲೇ ಕಾರ್ಯಕ್ರಮ ಆಗಬೇಕು ಎಂದು ಗುಡುಗಿದ್ದಾರೆ.
--- 
ಚನ್ನರಾಜ ಹಟ್ಟಿಹೊಳಿ ಗಾಡಿ ಹೊಡೆದು, ಬಾಗಿಲು ಕಾದು, ಬ್ಯಾಗು ಹಿಡಿದು ಎಂಎಲ್‌ಸಿ ಆಗಿದ್ದಾನೆ. ನಾನು ಅವನ ಜತೆ ಬಹಿರಂಗ ಚರ್ಚೆ ಮಾಡುವ ಅಗತ್ಯವಿಲ್ಲ. ನಾನು ಚನ್ನರಾಜ್ ಜತೆಗೆ ಬಹಿರಂಗ ಚರ್ಚೆ ಮಾಡುವುದಿಲ್ಲ. ಅಗತ್ಯ ಬಿದ್ದರೆ ಡಿಕೆಶಿ ಜತೆಗೆ ಚರ್ಚೆ ಮಾಡುತ್ತೇನೆ. ಚನ್ನರಾಜ್ ನನ್ನ ಲೆವೆಲ್ ಅಲ್ಲ, ಎಂಎಲ್‌ಸಿ ಆದರೂ ಕನಿಷ್ಠ  ಜ್ಞಾನವೂ ಆತನಿಗಿಲ್ಲ. ಹಕ್ಕುಚ್ಯುತಿ ಮಂಡನೆ ಮಾಡಲು ಆತನಿಗೆ ಹಕ್ಕಿದೆ, ನನ್ನ ಪಕ್ಷ ಸಂಘಟನೆ ಮಾಡಲು ನನಗೆ ಹಕ್ಕಿಲವೇ? ನಾನೇನು ಗ್ರಾಮೀಣದಲ್ಲಿ ಹಸ್ತಕ್ಷೇಪ ಮಾಡ್ತಿಲ್ಲ. ಸರ್ಕಾರಿ ಕೆಲಸದಲ್ಲಿ ಶಿಷ್ಟಾಚಾರ ಪಾಲಿಸುವಂತೆ ಆಗ್ರಹಿಸುತ್ತಿದ್ದೇನೆ.
  ರಮೇಶ ಜಾರಕಿಹೊಳಿ, ಬಿಜೆಪಿ ಶಾಸಕ, ಮಾಜಿ ಸಚಿವ

--

ರಾಜಹಂಸಗಡ ಅಭಿವೃದ್ಧಿಗೆ ಶಾಸಕಿ ಹೆಬ್ಬಾಳ್ಕರ್ ಅವರು 1 ಕೋಟಿ ರೂ. ನೀಡಿದ್ದಾರೆ. ಜನರ ಕನಸಿನಂತೆ ರಾಜಹಂಸಗಡದಲ್ಲಿ ಶಿವಾಜಿ ಪುತ್ಥಳಿ ನಿರ್ಮಾಣವಾಗಿ ಉದ್ಘಾಟನೆಯಾಗುತ್ತಿದೆ. ಆದರೆ, ರಮೇಶ ಜಾರಕಿಹೊಳಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೇನು ಸಂಬಂಧ? ಜಿಲ್ಲಾಡಳಿತದಿಂದ ಇನ್ನೂ ಆಮಂತ್ರಣ ಪತ್ರಿಕೆಯೇ ಬಂದಿಲ್ಲ. ಶಿಷ್ಟಾಚಾರ ಉಲ್ಲಂಘನೆ ಎಲ್ಲಿಂದ ಬಂತು? ನಾವೇನು ಶಿಷ್ಟಾಚಾರ ಉಲ್ಲಂಘಿಸುತ್ತಿಲ್ಲ. ಗೋಕಾಕನಲ್ಲಿ ಎಷ್ಟು ಬಾರಿ ಶಿಷ್ಟಾಚಾರ ಅನುಸರಿಸಿದ್ದೀರಿ? ನಿಮ್ಮದು ಅಲ್ಲಿ ಪಾಳೇಗಾರಿಕೆ. ಪಾಳೇಗಾರಿಕೆ ಮಾಡಿಕೊಂಡು ಬಂದ ನೀವು ಯಾವ ಶಿಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ?
  ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್ ಸದಸ್ಯ