ಬಸವಕಲ್ಯಾಣದ ಶಿವಾಜಿ  ಪಾರ್ಕ್​ನಲ್ಲಿ ಸಕಲ ಮರಾಠಾ ಸಮಾಜದಿಂದ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಮಾಜಿ ಎಂಎಲ್ಸಿ ವಿಜಯಸಿಂಗ್ ಮಾತನಾಡಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಪ್ರೊ.ಗಣೇಶ ಬೆಳಂಬೆ, ರವಿ ಗಾಯಕವಾಡ, ತಹಸೀನ್‌ಅಲಿ ಜಮಾದಾರ್ ಇತರರಿದ್ದರು. 
ಜಿಲ್ಲೆ

ಶಿವಾಜಿ ಪಾರ್ಕ್ ಆರು ತಿಂಗಳಲ್ಲಿ ಪೂರ್ಣ

ರಾಜು ಯಮಕನಮರಡಿ

ಬಸವಕಲ್ಯಾಣ: ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ೪ ತಿಂಗಳ ಹಿಂದೆ ಚಾಲನೆ ನೀಡಲಾಗಿದ್ದು, ೬ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಜಿ ಎಂಎಲ್ಸಿ ವಿಜಯಸಿಂಗ್ ಹೇಳಿದರು.

ನಗರದ ಶಿವಾಜಿ ಪಾರ್ಕ್​ನಲ್ಲಿ ಸಕಲ ಮರಾಠಾ ಸಮಾಜದಿಂದ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ರ ಪ್ರಯತ್ನ, ಹೋರಾಟದ ಫಲವಾಗಿ ಈ ಭಾಗಕ್ಕೆ ೩೭೧(ಜೆ) ಜಾರಿಯಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ ಎಂದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ಶಿವಾಜಿ ಪಾರ್ಕ್ ನಿರ್ಮಾಣ, ಮೂರ್ತಿ ಸ್ಥಾಪನೆ, ಅವರ ಚರಿತ್ರೆ ತಿಳಿದುಕೊಳ್ಳಲು ಗ್ರಂಥಾಲಯ ನಿರ್ಮಾಣವಾಗಬೇಕು ಎನ್ನುವುದು ತಮ್ಮ ಯೋಜನೆಯಾಗಿತ್ತು. ಹೀಗಾಗಿ ತಾವು ಶಾಸಕರಾಗಿದ್ದ ಅವಧಿಯಲ್ಲಿ ಪಾರ್ಕ್ ನಿರ್ಮಾಣ ಮಾಡಿದ್ದು, ಈಗ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ನಗರದಲ್ಲಿ ಪ್ರಮುಖ ರಸ್ತೆಯೊಂದಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ನಾಮಕರಣ ಆಗಬೇಕು ಎಂದರು.

ಮುಖಂಡ ಅರ್ಜುನ ಕನಕ ಮಾತನಾಡಿ, ನಗರದಲ್ಲಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ಪರಿಚಯಿಸುವ ಉದ್ದೇಶದಿಂದ ಶಿವಸೃಷ್ಠಿ ನಿರ್ಮಾಣಕ್ಕೆ ೧೦ ಕೋಟಿ ರೂ. ಅನುದಾನ ಸಾಲದು, ಕನಿಷ್ಠ ೧೦೦ ಕೋಟಿ ರೂ. ಅನುದಾನ ಸರ್ಕಾರದಿಂದ ಮಂಜೂರಿ ಮಾಡಬೇಕು ಎಂದರು.

ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ, ಮುಖಂಡ ರವಿ ಗಾಯಕವಾಡ ಮಾತನಾಡಿ, ಮಲ್ಲಿಕಾರ್ಜುನ ಖೂಬಾ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ನಗರದಲ್ಲಿ ಶಿವಾಜಿ ಪಾರ್ಕ್ಗಾಗಿ ಸ್ಥಳ ಒದಗಿಸಿದ್ದಾರೆ. ಈಗ ವಿಜಯಸಿಂಗ್ ಅನುದಾನ ಮಂಜೂರು ಮಾಡಿಸಿದ್ದು, ಅಭಿವೃದ್ಧಿ ಕೆಲಸ ನಡೆಯುತ್ತಿದೆ ಎಂದರು.

ಮಹಾರಾಷ್ಟçದ ಚಿಂತಕ ಪ್ರೊ.ಗಣೇಶ ಬೆಳಂಬೆ ವಿಶೇಷ ಉಪನ್ಯಾಸ ನೀಡಿದರು. ಮುಖಂಡ ತಾತ್ಯಾರಾವ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.

ನಗರಸಭೆ ಅಧ್ಯಕ್ಷ ಎಂ.ಡಿ. ಸಗೀರೋದ್ದಿನ್, ಮುಖಂಡರಾದ ಅನಿಲ ಭುಸಾರ, ಅಂಗದರಾವ ಜಗತಾಪ, ದತ್ತು ಧೂಳೆಪಾಟೀಲ್, ಪ್ರದೀಪ ವಾತಡೆ, ಮನೋಹರ್ ಮೈಸೆ, ತಹಸೀನ್‌ಅಲಿ ಜಮಾದಾರ್, ಆನಂದ ಪಾಟೀಲ್, ವಿಕ್ರಮ ಪಾಟೀಲ್, ಪ್ರಧ್ವಿಗೀರ ಗೋಸ್ವಾಮಿ, ನರಸಿಂಗರೆಡ್ಡಿ ಗದಲೇಗಾಂವ, ರಾಜು ಪಾಟೀಲ್ ಹಳ್ಳಿ, ಮಹೇಶ ಪಾಟೀಲ್, ಎಂ.ಜಿ.ರಾಜೋಳೆ, ಬಾಲಾಜಿ ಚಂಡಕಾಪುರೆ, ಡಿಕೆ ದಾವೂದ್, ಓಂ ಪ್ರಕಾಶ ಪಾಟೀಲ್, ಜ್ಞಾನೇಶ್ವರ ಪಾಟೀಲ್ ಪ್ರಮುಖರಿದ್ದರು.

ಕೆಕೆಎಂಪಿ ತಾಲೂಕು ಅಧ್ಯಕ್ಷ ವಿಟಿ ಸಿಂಧೆ ಸ್ವಾಗತಿಸಿದರು. ಸಂದೀಪ ಬಿರಾದಾರ ನಿರೂಪಣೆ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಕೋಟೆಯಿಂದ ಶಿವಾಜಿ ಪಾರ್ಕ್​ವರಗೆ ಮುಖ್ಯ ರಸ್ತೆ ಮಾರ್ಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.