ಜಿಲ್ಲೆ

ಶಿವಸ್ವರೂಪಿಯ ತೇರನೆಳೆದ ಭಕ್ತಸಮೂಹ, ಎಲ್ಲೆಡೆ ಮೊಳಗಿದ ಸದ್ಗುರು ಸಿದ್ಧಾರೂಢ ಮಹಾರಾಜ್ ಕೀ ಜೈ ಘೋಷಣೆ

Dharwad

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಮಹಾರಾಜ್ ಕೀ ಜೈ, ಶ್ರೀ ಗುರುನಾಥಾರೂಢ ಮಹಾರಾಜ್ ಕೀ ಜೈ, ಓಂ ನಮ ಶಿವಾಯ, ಹರ್ ಹರ್ ಮಹಾದೇವ... ಮುಂತಾದ ಜಯಘೋಷಗಳು ಮೊಳಗುತ್ತಿದ್ದಂತೆ ಭಾನುವಾರ ಸಂಜೆ ಗೋಧೂಳಿ ಸಮಯದಲ್ಲಿ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿ ಮಠದ ರಥವನ್ನು ಭಕ್ತಿ ಭಾವದೊಂದಿಗೆ ಎಳೆಯಲಾಯಿತು.

ಮಹಾಶಿವರಾತ್ರಿ ನಿಮಿತ್ತ ಕಳೆದೊಂದು ವಾರದಿಂದ ವಿವಿಧ ಧಾರ್ವಿುಕ ಕಾರ್ಯಕ್ರಮ, ಪ್ರವಚನಗಳು ನಡೆದು ಭಾನುವಾರ ಅದ್ದೂರಿ ರಥೋತ್ಸವ ಜರುಗಿತು. ಶಿವಸ್ವರೂಪಿ ಸಿದ್ಧಾರೂಢರ ದರ್ಶನ ಪಡೆದ ಲಕ್ಷಾಂತರ ಭಕ್ತರು ಕೃತಾರ್ಥ ಭಾವ ಹೊಂದಿದರು.

ಹುಬ್ಬಳ್ಳಿ- ಧಾರವಾಡ, ಅಕ್ಕಪಕ್ಕದ ಜಿಲ್ಲೆಗಳು ಮಾತ್ರವಲ್ಲ ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯದಿಂದಲೂ ಬಂದಿದ್ದ ಲಕ್ಷಾಂತರ ಭಕ್ತರು ಓಂ ನಮಃ ಶಿವಾಯ ಜಯಘೋಷ ಮೊಳಗಿಸಿದರು.

ರಥಬೀದಿಯಲ್ಲಿ ತೇರು ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಲಿಂಬೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಸಿದ್ಧಾರೂಢರು, ಗುರುನಾಥಾರೂಢರಲ್ಲಿ ಬೇಡಿಕೊಂಡರು. ಜಾಂಝå್ ಪಥಕ್, ಡೊಳ್ಳು, ಕರಡಿ ಮಜಲು, ಜಗ್ಗಲಿಗೆ, ಭಜನೆ ಮುಂತಾದ ವಾದ್ಯಮೇಳಗಳು ಉತ್ಸವಕ್ಕೆ ಮೆರುಗು ನೀಡಿದವು.

ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಾಗರ ರಥೋತ್ಸವವನ್ನು ಕಣ್ತುಂಬಿಕೊಂಡಿತು. ಜಾತಿ, ಧರ್ಮ ಭೇದಭಾವವಿಲ್ಲದೇ ಎಲ್ಲೆಡೆ ಭಕ್ತರ ದಂಡು ಕಂಡುಬಂತು.

ಕಾರವಾರ ರಸ್ತೆಯ ಮುಖ್ಯ ಮಹಾದ್ವಾರದ ವರೆಗೆ ರಥ ಬಂದು ವಾಪಸ್ ಶ್ರೀಮಠದ ಬಳಿ ತೆರಳಿತು. ವಿವಿಧೆಡೆಯಿಂದ ಬಂದ ಭಕ್ತರು ಉಭಯ ಶ್ರೀಗಳ ಗದ್ದುಗೆ ದರ್ಶನ ಮಾಡಿ ಶ್ರೀಮಠದಲ್ಲಿ ಪ್ರಸಾದ ಸ್ವೀಕರಿಸಿದರು.

ಮಠ ಸುತ್ತಮುತ್ತಲಿನ ಎರಡು ಕಿಲೋಮೀಟರ್ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿ ವಾಹನಗಳು, ಭಕ್ತರ ದಂಡು ಕಂಡು ಬಂತು.

ಪಾದಯಾತ್ರೆ ಮೂಲಕವೂ ಸಾವಿರಾರು ಜನರು ಬಂದು ಉಭಯ ಗುರುಗಳ ನಾಮಸ್ಮರಣೆ ಮಾಡುತ್ತ ಮಠದಲ್ಲಿ ಸೇವೆ ಸಲ್ಲಿಸಿದರು.

ಚಾಲನೆ: ರಥಕ್ಕೆ ಮಂಗಳಾರತಿ ನೆರವೇರಿಸುವ ಮೂಲಕ ಸಂಜೆ 5.40ಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ. ಶಾಂತಿ, ಟ್ರಸ್ಟ್ ಕಮಿಟಿ ಚೇರ್ಮನ್ ಧರಣೇಂದ್ರ ಜವಳಿ, ಉಪಾಧ್ಯಕ್ಷ ಡಾ. ಗೋವಿಂದ ಮಣ್ಣೂರ, ಗೌರವ ಕಾರ್ಯದರ್ಶಿ ಸಿದ್ರಾಮಪ್ಪ ಕೋಳಕೂರ, ಧರ್ಮದರ್ಶಿಗಳಾದ ಕೆ.ಎಲ್. ಪಾಟೀಲ, ಡಿ.ಡಿ. ಮಾಳಗಿ, ಶಾಮಾನಂದ ಪೂಜೇರಿ, ಹನಮಂತ ಕೊಟಬಾಗಿ, ಮಹೇಶಪ್ಪ ಹನಗೋಡಿ, ಜಗದೀಶ ಮಗಜಿಕೊಂಡಿ, ಇತರರು ಉಪಸ್ಥಿತರಿದ್ದರು.