ಬಾಗೇಪಲ್ಲಿ : ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅಪ್ಸರಾ ಚಿತ್ರಮಂದಿರಕ್ಕೆ ನುಗ್ಗಿ ಶ್ರೀಮನ್ನಾನಾರಾಯಣ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದನ್ನು ಖಂಡಿಸಿ ಕನ್ನಡ ಸೇನೆ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕನ್ನಡ ಸೇನೆ ತಾಲೂಕು ಅಧ್ಯಕ್ಷ ಆರ್.ರವಿಂದ್ರ ಮಾತನಾಡಿ, ಶಿವಸೇನೆ ಕಾರ್ಯಕರ್ತರು ಚಿತ್ರಮಂದಿರದ ಮಾಲೀಕರಿಗೆ ಬೆದರಿಕೆ ಹಾಕಿ ಕನ್ನಡ ಚಿತ್ರ ಪ್ರದರ್ಶನ ರದ್ದುಪಡಿಸಿ ಪೋಸ್ಟರ್ ಹರಿದು ಹಾಕಿದ್ದಾರೆ. ಜತೆಗೆ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ಸುಟ್ಟಿರುವುದು ಅಕ್ಷಮ್ಯ ಅಪರಾಧವಾಗಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕನ್ನಡಿಗರಿಗೆ ದಿನ ನಿತ್ಯ ಕಿರುಕುಳ ನೀಡಲಾಗುತ್ತಿದೆ. ಬೆಳಗಾವಿ ಗಡಿ ವಿಷಯದ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವಾಗಲೇ ಶಿವಸೇನೆ ಕಾರ್ಯಕರ್ತರು ಪದೇ ಪದೆ ತಕರಾರು ತೆಗೆದು ಪುಂಡಾಟಿಕೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಧ್ಯ ಪ್ರವೇಶ ಮಾಡಿ ಕನ್ನಡಿಗರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು. ಇದೇ ರೀತಿ ಮುಂದುವರೆದರೆ ಕನ್ನಡ ಸೇನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಎಂ.ನಾಗರಾಜ್ ಬೆಳಗಾವಿ ಗಡಿ ಪ್ರದೇಶದಲ್ಲಿ ಕನ್ನಡ ಧ್ವಜ ಸುಟ್ಟು ಕನ್ನಡ ಚಿತ್ರಕ್ಕೆ ಅಡ್ಡಿಪಡಿಸಿರುವುದು ವಿಷಾಧನೀಯ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಬಿ.ಎ.ಬಾಬಾಜಾನ್, ತಾಲೂಕು ಉಪಾಧ್ಯಕ್ಷ ಹಿದಾಯಿತ್ ವುಲ್ಲಾ, ನಗರ ಘಟಕದ ಉಪಾಧ್ಯಕ್ಷ ಮುದ್ದುಕೃಷ್ಣ, ಮುಖಂಡರಾದ ಟಿ.ಮಂಜುನಾಥ್, ಬಾಬಾ, ಕೃಷ್ಣ, ವೆಂಕಟಶಿವಪ್ಪ, ಸಲೀಂ, ಗಣೇಶ್, ಶಾಮೀರ್, ರಾಮ್‌ಮೋಹನ, ಸಿದ್ದಪ್ಪ ಮತ್ತಿತರರು ಇದ್ದರು.