ಜಿಲ್ಲೆ

ಶಿವಶರಣರು ಹಾಕಿಕೊಟ್ಟ ದಾರಿಯಲ್ಲಿ ನಡೆಯೋಣ:ನಗರಸಭೆ ಆಯುಕ್ತ ಸತೀಶ್ ಕುಮಾರ್ ಕರೆ

ಹಾಸನ: 12ನೇ ಶತಮಾನದಲ್ಲಿ ಶಿವಶರಣರು ಹಾಕಿಕೊಟ್ಟ ದಾರಿಯಲ್ಲಿ ನಡೆದು, ಅವರ ಆದರ್ಶವನ್ನು ಮೈಗೂಡಿಸಿಕೊಳ್ಳುವಂತೆ ನಗರಸಭೆ ಆಯುಕ್ತರಾದ ಸತೀಶ್ ಕುಮಾರ್ ಕರೆ ನೀಡಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಶಿವಶರಣ ಹಡಪದ ಅಪ್ಪಣ್ಣ ಸೇರಿದಂತೆ ಹಲವಾರು ಶರಣರು ವಚನಗಳ ಮೂಲಕ ಅತ್ಯುತ್ತಮ ಮೌಲ್ಯಗಳನ್ನು ನೀಡಿದ್ದಾರೆ. ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿಯತೆ ಬಗ್ಗೆ ವಿರೋಧಿಸಿ, ಸಾಮಾಜಿಕ ಬದ್ಧತೆ, ಮಾನವೀಯ ಮೌಲ್ಯಗಳನ್ನು ಪ್ರಚಾರ ಮಾಡಿದರು. ಇಂತಹವರ ಆದರ್ಶಗಳನ್ನು ನಾವೆಲ್ಲರೂ ಅನುಸರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ಹೊಳೆನರಸೀಪುರದ ಕೌಂಡಿನ್ಯ ಅವರು ಮಾತನಾಡಿ, ಹಡಪದ ಅಪ್ಪಣ್ಣನವರು 12ನೇ ಶತಮಾನದಲ್ಲಿ ಆದ್ಯ ವಚನಕಾರರಾಗಿದ್ದರು. ವಚನಗಳ ಮುಖಾಂತರ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದರು. ಅವರು ರಚಿಸಿದ್ದ 200ಕ್ಕೂ ಹೆಚ್ಚು ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ. ಅಸಮಾನತೆ, ಶೋಷಣೆಯನ್ನು ವಿರೋಧಿಸಿ ಹೊಸ ಸಮಾಜದ ಸ್ಥಾಪನೆಗೆ ಹೋರಾಡಿದ ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾಚಿದೇವ ಮುಂತಾದ ಶರಣರಂತೆಯೇ ಅಪ್ಪಣ್ಣನವರು ಹೋರಾಡಿದರು. 1134ರಲ್ಲಿ ಚನ್ನವೀರ ಹಾಗೂ ದೇವಕಮ್ಮ ದಂಪತಿಗೆ ಬಸವನಬಾಗೇವಾಡಿ ಸಮೀಪದ ಮಸಬಿನಾಳ ಎಂಬ ಗ್ರಾಮದಲ್ಲಿ ಜನಿಸಿದ ಅಪ್ಪಣ್ಣ ‘ಬಸವಪ್ರಿಯ ಕೂಡಲ ಚನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ ಅಂದಾಜು 243 ವಚನಗಳನ್ನು ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ಸೇರಿದಂತೆ ಇತರರು ಹಾಜರಿದ್ದರು.