ತುಮಕೂರು: ಮಡಿವಾಳ ಸಮಾಜದ ಕುಲಕಸುಬಿನ ಜತೆಗೆ, ಯುವಜನತೆ ಸ್ಪರ್ಧಾತ್ಮಕ ಪರೀೆಗಳಿಗೆ ಒತ್ತು ನೀಡುವಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಡಿವಾಳ ಸಂಘ ಹಾಗೂ ವಿವಿಧ ಮಡಿವಾಳ ಸಮುದಾಯದ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೀರ ಗಣಾಚಾರಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಡಿವಾಳ ವೃತ್ತಿಯಲ್ಲಿಯೂ ಒಳ್ಳೆಯ ಆದಾಯವಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದನ್ನು ಮರೆಯಬಾರದು. ಶಿಕ್ಷಣ, ಸಂಟನೆ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಎಲ್ಲರು ಕೈಜೋಡಿಸಬೇಕು ಎಂದರು.
12ನೇ ಶತಮಾನದಲ್ಲಿ ಸಮ ಸಮಾಜದ ಕನಸು ಕಂಡಿದ್ದ ಶಿವಶರಣರು ಅನುಭವ ಮಂಟಪದ ಮೂಲಕ ಜಾತಿ, ಧರ್ಮ, ಲಿಂಗ ತಾರತಮ್ಯ ವಿಲ್ಲದೆ ಎಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದರು. ಅಂತಹವರಲ್ಲಿ ಶಿವಶರಣರ ದಂಡನಾಯಕ ಮಡಿವಾಳ ಮಾಚಿದೇವರು ಒಬ್ಬರು ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.
ತುಮಕೂರು ತಾಲೂಕು ತಹಸೀಲ್ದಾರ್ ರಾಜೇಶ್ವರಿ ಮಾತನಾಡಿ, 12ನೇ ಶತಮಾನದ ಶಿವಶರಣರ ಪಡೆಯ ಅಂಗರಕ್ಷಕನಾಗಿ, ಕಲ್ಯಾಣ ಕ್ರಾಂತಿಯ ಕೊನೆಯವರಗೂ ತಾವು ನಂಬಿದ್ದ ಕಾಯಕಕ್ಕೆ ದ್ರೋಹ ಬಗೆಯದೇ ಭಕ್ತಿಯಿಂದ ನಡೆಸಿದವರು ಮಡಿವಾಳ ಮಾಚಿದೇವರು. ಅವರ ತತ್ವ ಸಿದ್ಧಾಂತಗಳನ್ನು ನಾವೆಲ್ಲರು ಅಳವಡಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.
ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಲಕ್ಷ್ಮಣ್ ಅಧ್ಯಕ್ಷತೆವಹಿಸಿದ್ದರು. ಡಾ.ಪಿ.ಎಸ್.ಪ್ರಸಾದ್ ಉಪನ್ಯಾಸ ನೀಡಿದರು. ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್, ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಜಿಲ್ಲಾ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟರಾಮಯ್ಯ,ಉಪಾಧ್ಯಕ್ಷ ಆರ್.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಕೆಂಪನರಸಯ್ಯ, ಉಪಾಧ್ಯಕ್ಷ ಕೆ.ಎ.ಗೋವಿಂದ ರಾಜು, ಬಿ.ಚಿಕ್ಕಣ್ಣ, ಎಚ್.ದೇವೇಂದ್ರ, ಶಾಂತಕುಮಾರ್, ಆರ್.ಕೆಂಪರಾಮಯ್ಯ, ಬಿ.ಆರ್.ಚನ್ನಬಸವಣ್ಣ, ಟಿ.ಎಸ್.ಲೋಕೇಶ್, ಎಂ.ಎ. ಆನಂದಮೂರ್ತಿ, ಎಸ್.ಕಾರಿಯಪ್ಪ, ಯದುಕುಮಾರ್, ಅಂಬಿಕಾ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.